ಸೆ.29ರಂದು ಪರಿಣಾಮದ ಕುರಿತು ಚರ್ಚೆ: ಮೊಯ್ಲಿ
ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ವಿಲೀನ

ಮಂಗಳೂರು,ಸೆ.27:ಈ ಬಾರಿ ಪ್ರತ್ಯೇಕವಾಗಿ ರೈಲ್ವೇ ಬಜೆಟನ್ನು ಮಂಡಿಸದೆ ಕೇಂದ್ರ ಹಣಕಾಸು ಬಜೆಟ್ ಜೊತೆಗೆ ಸೇರಿಸಿ ಮಂಡನೆ ಮಾಡುವುದರಿಂದ ರೈಲ್ವೆ ಇಲಾಖೆಯ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ಬಗ್ಗೆ ಮುಂದಿನ ಲೋಕ ಸಭಾ ಅಧಿವೇಶನದ ಮೊದಲು ಕೇಂದ್ರ ಸರಕಾರಕ್ಕೆ ವರದಿ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಅವರು ಇಂದು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ಈ ಬಾರಿ ಪ್ರತ್ಯೇಕ ರೈಲ್ವೇ ಬಜೆಟ್ ಮಂಡನೆ ಮಾಡದಿರುವ ತೀರ್ಮಾನದಿಂದ ರಾಷ್ಟ್ರದ ಅವೃದ್ಧಿಯ ದೃಷ್ಟಿಯಿಂದ ಯಾವ ಪರಿಣಾಮ ಉಂಟಾಗಲಿದೆ ಎಂಬ ಬಗ್ಗೆ ಸಮಿತಿ ಸಮಾಲೋಚನೆ ನಡೆಸಿ ವರದಿ ನೀಡಲಿದೆ.ಈ ಬಗ್ಗೆ ಸೆ.29ರಂದು ಸಭೆ ನಡೆಸಲಾಗುವುದು.ರೈಲ್ವೇ ಇಲಾಖೆಯ ಜೊತೆಗೂ ಸಮಾಲೋಚನೆ ನಡೆಸಿದ ಬಳಿಕ ನವೆಂಬರ್ ತಿಂಗಳಲ್ಲಿ ವರದಿ ನೀಡಲಾಗುವುದು.ಪ್ರಸಕ್ತ ತಾನು ಮೂರನೆ ಬಾರಿಗೆ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ವೀರಪ್ಪ ಮೊಯ್ಲಿ ತಿಳಿಸಿದರು.
ಬಜೆಟ್ ಮಂಡನೆಯ ಬಳಿಕ ವಿವಿಧ ಇಲಾಖೆಯ ಮೂಲಕ ಅನುಷ್ಠಾನಗೊಂಡ ಯೋಜನೆಗಳ ವರದಿಯನ್ನು ಆಯಾ ಇಲಾಖೆಗಳ ಮೂಲಕ ಸಂಗ್ರಹಿಸಿ ಅವಲೋಕನ ನಡೆಸಲಾಗುತ್ತದೆ.ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಸಮಿತಿ ಸರಕಾರಕ್ಕೆ ವರದಿ ನೀಡುತ್ತದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಮಹಾನ್ ಕೃತಿ ‘ಬಾಹುಬಲಿ’ ಶೀಘ್ರದಲ್ಲಿ ಪ್ರಕಟ
ಮುಂದಿನ ಶ್ರವಣ ಬೆಳಗೊಳದ ಮಹಾ ಮಸ್ತಕಾಭಿಷೇಕದ ಮೊದಲು ನನ್ನ ಮಹಾನ್ ಕೃತಿ ಬಾಹುಬಲಿ ಪ್ರಕಟವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಸಾಹಿತಿ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.







