ನೀರು ತಡೆದರೆ ಯುದ್ಧ ಮಾಡಿದಂತೆ : ಪಾಕ್ ಎಚ್ಚರಿಕೆ

ಇಸ್ಲಾಮಾಬಾದ್, ಸೆ. 27: ಇಂಡಸ್ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಉಲ್ಲಂಘಿಸಿದರೆ ಅದನ್ನು ಯುದ್ದದ ನಡೆ ಎಂದು ಪರಿಗಣಿಸಿ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಪಾಕಿಸ್ತಾನದ ವಿದೇಶ ಕಾರ್ಯನೀತಿ ಮುಖ್ಯಸ್ಥ ಸರ್ತಾಝ್ ಅಝೀಝ್ ಹೇಳಿದ್ದಾರೆ. ಭಾರತ ಸರಕಾರ ಇಂಡಸ್ ನದಿ ನೀರು ಹಂಚಿಕೆ ಒಪ್ಪಂದದಲ್ಲಿ ಮಾರ್ಪಾಡು ಮಾಡುವ ಕುರಿತಾದ ವರದಿಯ ಬಗ್ಗೆ ಅವರು ಪಾಕಿಸ್ತಾನದ ಸಂಸತ್ತಿನ ಕೆಳಮನೆಯಲ್ಲಿ ಹೇಳಿಕೆ ನೀಡುತ್ತಿದ್ದರು. ಅಂತರಾಷ್ಟ್ರೀಯ ನಿಯಮ ಪ್ರಕಾರ ಭಾರತವು ಏಕಪಕ್ಷೀಯವಾಗಿ ಒಪ್ಪಂದದಿಂದ ಹಿಂದೆ ಸರಿಯುವಂತಿಲ್ಲ ಎಂದವರು ತಿಳಿಸಿದರು. ವಿಶ್ವಬ್ಯಾಂಕ್‌ನ ಮಧ್ಯಸ್ತಿಕೆಯಲ್ಲಿ 56 ವರ್ಷಗಳ ಹಿಂದೆ ಸಹಿ ಹಾಕಲ್ಪಟ್ಟಿರುವ ಈ ಒಪ್ಪಂದವನ್ನು ಯುದ್ದದ ಸಂದರ್ಭದಲ್ಲೂ ಅಮಾನತಿನಲ್ಲಿಡುವಂತಿಲ್ಲ. ಕಾರ್ಗಿಲ್ ಮತ್ತು ಸಿಯಾಚಿನ್ ಸಂಘರ್ಷದ ಸಂದರ್ಭದಲ್ಲೂ ಈ ಒಪ್ಪಂದ ಚಾಲ್ತಿಯಲ್ಲಿತ್ತು . ಒಪ್ಪಂದವನ್ನು ತಡೆಹಿಡಿಯುವ ಅಥವಾ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿಯುವ ಬಗ್ಗೆ ಯಾವುದೇ ಕರಾರನ್ನು ಇಲ್ಲಿ ಸೇರಿಸಲಾಗಿಲ್ಲ ಎಂದು ವಿದೇಶ ವ್ಯವಹಾರಗಳ ಬಗ್ಗೆ ಪ್ರಧಾನಿ ನವಾಜ್ ಷರೀಫ್ ಅವರ ಸಲಹೆಗಾರರಾಗಿರುವ ಅಝೀಝ್ ತಿಳಿಸಿದ್ದಾರೆ.





