ಐತಿಹಾಸಿಕ ಮಸೂದೆ ಅಂಗೀಕರಿಸಿದ ಪಾಕ್ ಸಂಸತ್ತು

ಇಸ್ಲಾಮಾಬಾದ್,ಸೆ.27: ಐತಿಹಾಸಿಕ ಕ್ರಮವೊಂದರಲ್ಲಿ ಪಾಕಿಸ್ತಾನ ಸಂಸತ್ತು ಕೊನೆಗೂ ಹಿಂದು ವಿವಾದ ಮಸೂದೆಯನ್ನು ಅಂಗೀಕರಿಸಿದೆ. ಇದರಿಂದಾಗಿ ದೇಶದ ಅಲ್ಪಸಂಖ್ಯಾತ ಹಿಂದುಗಳು ತಮ್ಮ ಮದುವೆಗಳನ್ನು ನೋಂದಾಯಿಸಿಕೊಳ್ಳುವುದು ಸಾಧ್ಯವಾಗಲಿದೆ. ಸೋಮವಾರ ಮಾನವ ಹಕ್ಕುಗಳ ಸಚಿವ ಕಮ್ರಾನ್ ಮಿಕಾಯಿಲ್ ಅವರು ಕೆಳಮನೆ ಅಥವಾ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಈ ಬಹು ವಿಳಂಬಿತ ಮಸೂದೆಯನ್ನು ಮಂಡಿಸಿದ್ದು, ಸದನವು ಪ್ರಪ್ರಥಮ ರಾಷ್ಟ್ರೀಯ ಕಾನೂನನ್ನು ಅಂಗೀಕರಿಸಿತು.
ಮಸೂದೆಯು ಹಿಂದುಗಳಿಗೆ ವಿವಾಹವಾಗಲು 18 ವರ್ಷಗಳ ಕನಿಷ್ಠ ವಯಸ್ಸನ್ನು ನಿಗದಿಗೊಳಿಸಿದೆ. ಇತರ ಧರ್ಮಗಳ ನಾಗರಿಕರಿಗೆ ಶಾಸನಬದ್ಧ ಕನಿಷ್ಠ ವಿವಾಹ ವಯಸ್ಸು ಪುರುಷರಿಗೆ 18 ಮತ್ತು ಮಹಿಳೆಯರಿಗೆ 16 ವರ್ಷಗಳಾಗಿವೆ.
ಕನಿಷ್ಠ ವಯಸ್ಸಿಗೆ ಸಂಬಂಧಿಸಿದಂತೆ ಕಾನೂನು ಉಲ್ಲಂಘಿಸಿದರೆ ಆರು ತಿಂಗಳ ಜೈಲುವಾಸದ ಜೊತೆಗೆ 5,000ರೂ.ದಂಡವನ್ನೂ ತುಂಬಬೇಕಾಗುತ್ತದೆ.
ಪಾಕಿಸ್ತಾನದಲ್ಲಿಯ 20ರಿಂದ 24ರ ವಯೋಮಿತಿಯ ಶೇ.21ರಷ್ಟು ಮಹಿಳೆಯರು 18 ವರ್ಷ ತುಂಬುವ ಮುನ್ನವೇ ಮೊದಲ ಮದುವೆಯಾಗುತ್ತಾರೆ ಮತ್ತು ಶೇ.3ರಷ್ಟು ಮಹಿಳೆಯರು 16 ವರ್ಷಕ್ಕೆ ಮೊದಲೇ ಮದುವೆಯಾಗುತ್ತಾರೆ ಎಂದು ಯುನಿಸೆಫ್ ಅಂದಾಜಿಸಿದೆ.
ಮದುವೆಯ ದಾಖಲೆ ಹಿಂದು ಮಹಿಳೆಯರಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸಲಿದೆ ಎಂದು ಹೇಳಿರುವ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ರೊಹ್ರಾ ಯೂಸುಫ್, ಮದುವೆ ನೋದಣಿಯಾದರೆ ಕನಿಷ್ಠ ಕೆಲವು ಹಕ್ಕುಗಳು ಅವರಿಗೆ ಪ್ರಾಪ್ತವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನಿರ್ದಿಷ್ಟವಾಗಿ ವಿಧವೆಯರು ಸರಕಾರದ ಸೌಲಭ್ಯ ಪಡೆಯಲು ತಾವು ವಿವಾಹಿತರು ಎಂದು ರುಜುವಾತು ಪಡಿಸಲು ಸಾಧ್ಯವಿರಲಿಲ್ಲ.
ನೂತನ ಕಾನೂನು ವಿಧವೆಯರು ತಮ್ಮ ಪತಿಯ ನಿಧನದ ಆರು ತಿಂಗಳ ಬಳಿಕ ಪುನರ್‌ವಿವಾಹವಾಗಲು ಶಾಸನಬದ್ಧ ಅವಕಾಶವನ್ನು ಕಲ್ಪಿಸಿದೆ.
ಈ ಕಾನೂನು ಹಿಂದುಗಳಿಗೆ ವಿಚ್ಛೇದನದ ಹಕ್ಕನ್ನೂ ನೀಡಿದೆ. ಪತಿಯ ಅಲಕ್ಷ,ದ್ವಿಪತ್ನಿತ್ವ ಅಥವಾ 16 ವರ್ಷಕ್ಕಿಂತ ಮೊದಲೇ ಮದುವೆಯಾಗಿದೆ ಎಂಬ ಕಾರಣಕ್ಕೆ ವಿಚ್ಛೇದನವನ್ನು ಕೋರುವ ಹೆಚ್ಚುವರಿ ಹಕ್ಕನ್ನು ಮಹಿಳೆಯರಿಗೆ ನೀಡಿದೆ.
ಆದರೆ ಅಪಹರಣ ಮತ್ತು ಮತಾಂತರ ವಿಷಯದಲ್ಲಿ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಮಾನವ ಹಕ್ಕು ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಬಲವಂತದ ಮದುವೆ ನಡೆದಿದೆ ಎಂಬ ಶಂಕೆಯಿದ್ದಾಗ ಆ ಬಗ್ಗೆ ತನಿಖೆ ನಡೆಸಬೇಕು. ನ್ಯಾಯಾಲಯ ಸೇರಿದಂತೆ ಯಾರೂ ತಮ್ಮ ಗೋಳು ಕೇಳಿಸಿಕೊಳ್ಳುತ್ತಿಲ್ಲ ಎಂದು ಹಿಂದು ಸಮುದಾಯದ ಸದಸ್ಯರು ಪ್ರಸಕ್ತ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಯೂಸುಫ್ ಹೇಳಿದರು.
10 ತಿಂಗಳ ಸುದೀರ್ಘ ಚರ್ಚೆಯ ಬಳಿಕ ರಾಷ್ಟ್ರೀಯ ಅಸೆಂಬ್ಲಿ ಮಸೂದೆಯನ್ನು ಅಂಗೀಕರಿಸಿದೆ. ಈಗ ಸೆನೆಟ್ ಅದನ್ನು ಅಂಗೀಕರಿಸಬೇಕಾಗಿದ್ದು, ಹೆಚ್ಚು ವಿಳಂಬವಿಲ್ಲದೆ ಅದು ಅಂಗೀಕಾರವಾಗುವ ನಿರೀಕ್ಷೆಯಿದೆ.
ಮುಸ್ಲಿಮರೇ ಬಹುಸಂಖ್ಯಾಕರಾಗಿರುವ 190 ಮಿ.ಜನಸಂಖ್ಯೆಯ ಪಾಕಿಸ್ತಾನದಲ್ಲಿ ಹಿಂದುಗಳ ಸಂಖ್ಯೆ ಅಂದಾಜು ಶೇ.1.6ರಷ್ಟಿದೆ. ಆದರೆ 1947ರಲ್ಲಿ ಪಾಕಿಸ್ತಾನಕ್ಕೆ ಸ್ವಾತಂತ್ರ ದೊರೆತಾಗಿನಿಂದಲೂ ತಮ್ಮ ಮದುವೆಗಳನ್ನು ನೋಂದಾಯಿಸುವ ಯಾವುದೇ ಕಾನೂನು ವ್ಯವಸ್ಥೆಯಿಂದ ಅವರು ವಂಚಿತರಾಗಿದ್ದಾರೆ.
ಇನ್ನೊಂದು ಪ್ರಮುಖ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವಾಗಿರುವ ಕ್ರೈಸ್ತರು ತಮ್ಮ ಮದುವೆಗಳನ್ನು ನೋಂದಾಯಿಸಿಕೊಳ್ಳಲು 1870ರ ಬ್ರಿಟಿಷ್ ಕಾನೂನಿನಲ್ಲಿ ಅವಕಾಶ ಹೊಂದಿದ್ದಾರೆ.







