ಜೀವನ ಶೈಲಿಯ ಬದಲಾವಣೆಯಿಂದ ಉತ್ತಮ ಆರೊಗ್ಯ ಸಾಧ್ಯ: ಡಾ.ಕಲ್ಪನಾ
ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಉಚಿತ ಆರೋಗ್ಯ ತಪಾಸಣೆ

ಚಿಕ್ಕಮಗಳೂರು, ಸೆ.27: ಉತ್ತಮ ಜೀವನ ಶೈಲಿಯ ಬದಲಾವಣೆಯಿಂದ ಮಾತ್ರ ಉತ್ತಮ ಆರೊಗ್ಯ ಪಡೆಯಲು ಸಾಧ್ಯ ಎಂದು ಜಿಲ್ಲಾ ವಿಚಕ್ಷಣಾಧಿಕಾರಿ ಡಾ.ಕಲ್ಪನಾ ತಿಳಿಸಿದರು.
ಅವರು ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳಿಗೆ ಕ್ಷಯ ರೋಗ, ಎಚ್‌ಐವಿ/ಏಡ್ಸ್ ಅರಿವು ಕಾರ್ಯಕ್ರಮ ಹಾಗೂ ಉಚಿತ ಆರೊಗ್ಯ ತಪಾಸಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಳಿಕ ಅವರು ಅಸಾಂಕ್ರಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ವಿಜಯಕುಮಾರ ಚೌಹಾಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕು ಎಂದು ಕಾರಾಗೃಹದ ಸಿಬ್ಬಂದಿ ಮತ್ತು ಕೈದಿಗಳಿಗೆ ಉತ್ತೇಜನ ನೀಡಿದರು.
131ಕ್ಕೂ ಹೆಚ್ಚು ಕೈದಿಗಳು ಹಾಗೂ 15ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಮಧುಮೇಹ,ರಕ್ತ ದೊತ್ತಡ ಮತ್ತು ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ಶಿಬಿರದಲ್ಲಿ ಕೈಮರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್ ನಾಯಕ್, ಡಾ. ಪಾಂಡುರಂಗ ಹೆಬ್ಬಾರ್, ಜಿಲ್ಲಾ ವಿಚಕ್ಷಣ ಟಕ ಚಿಕ್ಕಮಗಳೂರು ಹಾಗೂ ಎನ್‌ಸಿಡಿ ವಿಭಾಗದ ಸಿಬ್ಬಂದಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾರಾಗೃಹ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಇಲಾಖೆ, ಪಾಪ್ಯುಲೇಷನ್ ಸರ್ವಿಸಸ್ ಇಂಟರ್ ನ್ಯಾಷನಲ್ ಹಾಗೂ ಬಾಂಧವ್ಯ ನೆಟ್‌ವರ್ಕ್ ಚಿಕ್ಕಮಗಳೂರು ಸಂಯುಕ್ತಾಶ್ರಯದಲ್ಲಿ ಕಾರಾಗೃಹದಲ್ಲಿರುವ ಕೈದಿಗಳಿಗೆ ಹಾಗೂ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಾಗೂ ಕ್ಷಯ ರೋಗ ಮತ್ತು ಎಚ್‌ಐವಿ/ಏಡ್ಸ್ ಅರಿವು ಕಾರ್ಯಕ್ರಮವನ್ನು ಆಯೋಜಿಸಿತ್ತು.
ಜಿಲ್ಲಾ ಕ್ಷಯರೋಗ ನಿಯಂತ್ರಣಾ ಘಟಕದ ಸಿಬ್ಬಂದಿ, ಪಾಪ್ಯುಲೇಷನ್ ಸರ್ವಿಸಸ್ ಇಂಟರ್ ನ್ಯಾಷನಲ್ ಹಾಗೂ ಬಾಂಧವ್ಯ ನೆಟ್‌ವರ್ಕ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







