ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳಿ್ಳ:ಡಾ. ಇಮ್ತಿಯಾಝ್ ಅಹ್ಮದ್‌ಖಾನ್
‘ನಾನು ಮೆಚ್ಚಿದ ಪುಸ್ತಕ’ ಭಾಷಣ ಸ್ಪರ್ಧೆ

ಅಂಕೋಲಾ, ಸೆ.27: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಹಿರಿಯ ಸಾಹಿತಿಗಳ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕದೊಂದಿಗೆ ಗೆಳೆತನ ಮಾಡಿಕೊಂಡರೆ ಯಾವುದೇ ಕೆಟ್ಟ ಆಲೋಚನೆಗಳಿಗೆ ಆಸ್ಪದ ಇರುವುದಿಲ್ಲ ಎಂದು ಜಿ.ಸಿ. ಕಾಲೇಜಿನ ಪ್ರಾಚಾರ್ಯ ಡಾ. ಇಮ್ತಿಯಾಝ್ ಅಹ್ಮದ್‌ಖಾನ್ ಅಭಿಪ್ರಾಯಪಟ್ಟರು.
ಪಟ್ಟಣದ ಗೋಖಲೆ ಸೆಂಟೆನರಿ ಕಾಲೇಜ್ ಹಾಗೂ ಲಯನ್ಸ್ ಕ್ಲಬ್ ಇವುಗಳ ಆಶ್ರಯದಲ್ಲಿ ಜಿ.ಸಿ. ಕಾಲೇಜಿನ ಯುಜಿಸಿ ಸಭಾಭವನದಲ್ಲಿ ‘ನಾನು ಮೆಚ್ಚಿದ ಪುಸ್ತಕ’ ಎಂಬ ವಿಷಯದ ಕುರಿತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಭಾಷಣ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆನರಾ ವೆಲ್‌ಫೇರ್ ಟ್ರಸ್ಟ್ ಆಡಳಿತಾಧಿಕಾರಿ ಕೆ.ವಿ. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಓದು ಮನುಷ್ಯನನ್ನು ಸದೃಢ ವ್ಯಕ್ತಿಯನ್ನಾಗಿಸುತ್ತದೆ. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವುದಕ್ಕಾಗಿ ಲಯನ್ಸ್ ಕ್ಲಬ್‌ನವರು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಭಾಷಣ ಸ್ಪರ್ಧೆಯಲ್ಲಿ ಹಿಮಾಲಯ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ನಮೃತಾ ಹೆಗಡೆ ಪ್ರಥಮ, ಪೂರ್ಣಪ್ರಜ್ಞಾ ಕರುಣಾ ವಿಜ್ಞಾನ ಮಹಾವಿದ್ಯಾಲಯದ ಗಾಯತ್ರಿ ಸಾವಂತ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಜೆರಿನಾ ಜಯರಾಜ ತೃತೀಯ ಬಹುಮಾನ ಪಡೆದರು. ಉಪನ್ಯಾಸಕರಾದ ಶೈಲಜಾ ಭಟ್, ಸುಬ್ರಹ್ಮಣ್ಯ ವಿ.ಭಟ್, ನಾಗರಾಜ ದಿವಗಿಕರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಎಚ್. ನಾಯ್ಕ ಸ್ವಾಗತಿಸಿ ಪರಿಚಯಿಸಿದರು. ನಮೃತಾ ಗಾಂವಕರ ಪ್ರಾರ್ಥಿಸಿದರು. ಸದಸ್ಯ ಮಹಾಂತೇಶ ರೇವಡಿ ನಿರ್ವಹಿಸಿದರು.







