ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು: ಜಿಲ್ಲಾಧಿಕಾರಿ
ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಮಡಿಕೇರಿ ಸೆ.27: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ರಾಜರ ಗದ್ದುಗೆ ಪ್ರವಾಸಿ ತಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ನಗರಸಭೆ ಪೌರ ಕಾರ್ಮಿಕರು ಸೇರಿದಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಉಪ ವಿಭಾಗಾಧಿಕಾರಿ ಡಾ.ನಂಜುಂಡೇ ಗೌಡ, ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ಅವರು ಸ್ವತ: ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿಗಳು ಕತ್ತಿ ಹಿಡಿದು ಕಳೆ ಕಿತ್ತರೆ, ಪೌರಾಯುಕ್ತರು ಯಂತ್ರದ ಮೂಲಕ ಕಾಡು ಗಿಡಗಳನ್ನು ಕಡಿದು ಇತರರಲ್ಲಿ ಸ್ವಚ್ಛತೆ ಬಗ್ಗೆ ಸ್ಫೂರ್ತಿ ತುಂಬಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು ರಾಜರ ಗದ್ದುಗೆಯಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡುವ ಸಂಬಂಧ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು. ಪ್ರಮುಖವಾಗಿ ಕುಡಿಯುವ ನೀರು, ಶೌಚಾಲಯಗಳ ಸೌಲಭ್ಯವನ್ನು ಪ್ರವಾಸಿಗರಿಗೆ ನೀಡುವಲ್ಲಿ ಅಧಿಕಾರಿ ಗಳು ಕಾರ್ಯ ಯೋಜನೆ ರೂಪಿಸಬೇಕಾಗಿದೆ ಎಂದು ತಿಳಿಸಿದರು.
ಗದ್ದುಗೆಯಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯ ಆರಂಭಿಸಿದ್ದರೂ, ಇದರ ನಿರ್ವಹಣೆಯತ್ತ ಹೆಚ್ಚಿನ ಗಮನಹರಿಸಬೇಕಿದ್ದು, ಈ ಸಂಬಂಧ ಇಲಾಖೆ ಕಾರ್ಯ ಯೋಜನೆ ನಿರ್ವಹಿಸುವಂತೆ ಆಗಬೇಕು. ಹಾಗೆಯೇ ಸ್ವಚ್ಛತೆ ಕಡೆ ಗಮನಹರಿಸಬೇಕು ಎಂದು ಹೇಳಿದರು. ಅಬ್ಬಿಫಾಲ್ಸ್ ಹಾಗೂ ಮಾಂದಲ್‌ಪಟ್ಟಿಗೆ ಹೋಗುವ ಪ್ರವಾಸಿಗರು ಗದ್ದುಗೆಗೆ ಬರುವಾಗ ಪ್ರವಾಸಿಗರನ್ನು ಆಕರ್ಷಿಸಬೇಕು. ಈ ಸಂಬಂಧ ನಾಮ ಫಲಕ ಅಳವಡಿಕೆ, ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವಂತೆ ಗ್ರೀನ್ ಸಿಟಿ ಫೋರಂ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಸ್ವಚ್ಛತೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರು, ನಗರದ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು, ಸರಕಾರಿ ಪ್ರ.ದ.ಕಾಲೇಜು ವಿದ್ಯಾರ್ಥಿಗಳು, ಕ್ಲಬ್ ಮಹೀಂದ್ರಾ ಸಂಸ್ಥೆ, ಗ್ರೀನ್ ಸಿಟಿ ಫೋರಂ, ಪ್ರವಾಸಿ ಮಿತ್ರ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.







