ಬಿಜೆಪಿ ಗೆಲುವಿಗೆ ಆರೆಸ್ಸೆಸ್ ರಣತಂತ್ರ
ಬೆಂಗಳೂರು, ಸೆ.27: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತು ಆರೆಸ್ಸೆಸ್ ಹಾಗೂ ಬಿಜೆಪಿ ಸಮನ್ವಯ ಸಮಿತಿ ಸದಸ್ಯರು ವಿಸ್ತೃತ ಚರ್ಚೆ ನಡೆಸಿದ್ದಾರೆ.
ನಗರದ ಆರೆಸ್ಸೆಸ್ ಕಚೇರಿ ಕೇಶವ ಕೃಪಾದಲ್ಲಿ ಸಭೆ ನಡೆಸಿರುವ ಸಮನ್ವಯ ಸಮಿತಿ ಸಭೆಯಲ್ಲಿ ಬಿಜೆಪಿಯ ಬಲವರ್ಧನೆಗೆ ಆರೆಸ್ಸೆಸ್ ಯಾವ ರೀತಿಯ ಪಾತ್ರ ವಹಿಸಬೇಕೆಂಬುದರ ಕುರಿತು ಚರ್ಚೆ ನಡೆಸಲಾಗಿದೆ. ಈ ವೇಳೆ ಆರೆಸ್ಸೆಸ್ ಮುಖಂಡರು ತಮ್ಮ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿಯ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಆರೆಸ್ಸೆಸ್ ಅಂಗ ಸಂಸ್ಥೆಗಳಾದ ಬಜರಂಗದಳ, ಮಜ್ದೂರ್ ಸಭಾ, ವಿಶ್ವಹಿಂದೂ ಪರಿಷತ್ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಮುಂದಿನ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಮುಂಬರುವ ದಸರಾ, ದೀಪಾವಳಿ ಹಬ್ಬಗಳನ್ನು ಜನರೊಂದಿಗೆ ಆಚರಿಸುವುದು ಸೇರಿದಂತೆ ರಾಷ್ಟ್ರ ಪ್ರೇಮದ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯತೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.







