ರೈತ ಮುಖಂಡರ ಬಂಧನ, ಬಿಡುಗಡೆ
ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಪ್ರತಿಭಟನೆ

ಬೆಂಗಳೂರು, ಸೆ.27: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ಮಂಗಳವಾರ ಪುನಃ 18 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಆದೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ರೈತ ಮುಖಂಡರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.
ಮಂಗಳವಾರ ನಗರದ ಆನಂದರಾವ್ ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತ ಮುಖಂಡರು ಸುಪ್ರೀಂ ಕೋರ್ಟ್ ಆದೇಶ ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ರೈತಮುಖಂಡರನ್ನು ಬಂಧಿಸಿ, ಮೈಸೂರು ರಸ್ತೆಯಲ್ಲಿ ಪೊಲೀಸ್ ಮೈದಾನಕ್ಕೆ ಕರೆದೊಯ್ದರು.
ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಕೆಆರ್‌ಆರ್‌ಎಸ್ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸುಪ್ರೀಂ ಕೋರ್ಟ್ ಕರ್ನಾಟಕದ ಮೇಲೆ ಪುನಃ ಗದಾಪ್ರಹಾರ ನಡೆಸಿದ್ದು, ತಮಿಳುನಾಡಿಗೆ ಮತ್ತೆ 18 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿರುವುದು ಅಸಮಾಧಾನ ತಂದಿದೆ ಎಂದರು.
ರೈತ ಮುಖಂಡರಾದ ಶಿವಪ್ಪ, ಸುರೇಶ್, ರಘು, ಕೇಶವರೆಡ್ಡಿ ಸೇರಿ ಪ್ರಮುಖರು ಹಾಜರಿದ್ದರು.





