ಅ.2ರಂದು ‘ಶಾಂತಿಯ ಸಾಧ್ಯತೆಗಳು’ ವಿಚಾರಸಂಕಿರಣ
ಉಡುಪಿ, ಸೆ.27: ‘ಶಾಂತಿಯ ಸಾಧ್ಯತೆಗಳು’ ಎಂಬ ವಿಷಯದ ಕುರಿತು ಗಣ್ಯರ ವಿಚಾರ ಮಂಡನೆ ಹಾಗೂ ಸಂವಾದ ಕಾರ್ಯಕ್ರಮವು ಅ.2ರಂದು ಮಣಿಪಾಲ ವಿವಿಯ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯಲಿದ್ದು, ಇದರಲ್ಲಿ ಶಾಂತಿಗೆ ಸಂಬಂಧಿಸಿದಂತೆ 7 ವಿಭಿನ್ನ ವಿಚಾರಗಳ ಬಗ್ಗೆ ವಿಚಾರಮಂಡನೆ ನಡೆಯಲಿದೆ.
ಮಣಿಪಾಲ ವಿವಿಯ ಪ್ರೊ.ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಬೆಳಗ್ಗೆ 10:30ಕ್ಕೆ ವಿಚಾರ ಮಂಡನೆಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮವು ಮಣಿಪಾಲ ಅಂಚೆ ಕಚೇರಿಯ ಹಿಂದಿರುವ ಹಳೇ ಟಾಪ್ಮಿ ಕಟ್ಟಡದ ಎಲ್.ಎಚ್.1 ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭ ಗಾಂಧಿ ಅಧ್ಯಯನದಲ್ಲಿ ತಮ್ಮ ಕೋರ್ಸ್ ಮುಗಿಸಿರುವ ಹಿಂದಿನ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳ ವಿತರಣಾ ಕಾರ್ಯಕ್ರಮ ನಡೆಯಲಿದೆ. ಸಂಕಿರಣದಲ್ಲಿ ಮಂಡನೆಗೊಳ್ಳಲಿರುವ ವಿಷಯಗಳು: ವಿ.ಎಸ್.ಅಗರ್ವಾಲ್‌ರಿಂದ ‘ಶಾಂತಿ: ಒಳಗೂ ಮತ್ತು ಹೊರಗೂ’, ಅರುಣಿಮಾ ಚೌಹಾಣ್‌ರಿಂದ ‘ಅಣ್ವಸ್ತ್ರೀಕರಣದ ನಿರ್ಮೂಲನೆ’, ಡಾ.ಉನ್ನಿಕೃಷ್ಣನ್‌ರಿಂದ ‘ಸಮಾಜ-ಆರ್ಥಿಕ ಸಮಾನತೆ -ಶಾಂತಿಯತ್ತ ದಾರಿ’, ಇಂದ್ರನೀಲ ಸರ್ಕಾರ್‌ರಿಂದ ‘ಸಮೂಹ ಮಾಧ್ಯಮ: ಶಾಂತಿ ಅಥವಾ ಕ್ರೌರ್ಯ ಯಾವುದನ್ನು ಪ್ರತಿಬಿಂಬಿಸುತ್ತಿದೆ?’, ಆಶೀರ್ವಾದ್ ಪಾಲ್ ಥಾಮಸ್‌ರಿಂದ ‘ಸಿರಿಯಾ ಒಂದು ಪರ್ಯಾಲೋಚನೆ: ಗಾಂಧಿ ಚಿಂತನೆ’, ಆಕಾಶ್ ಪಿ. ಇವರಿಂದ ‘ಹವಾಮಾನ ವೈಪರೀತ್ಯದ ಮಾತುಕತೆ ಮತ್ತು ಭಾರತ’ ಹಾಗೂ ಡಾ.ವಿ.ಐ.ಜಾರ್ಜ್‌ರಿಂದ ‘ಧರ್ಮ ಮತ್ತು ಸಾಮರಸ್ಯ’ ವಿಚಾರದ ಕುರಿತು ಪ್ರಬಂಧ ಮಂಡನೆಯಾಗಲಿದೆ.
ಗಾಂಧಿ ಜಯಂತಿ ಸಂದರ್ಭ ಈ ವಿಚಾರ ಮಂಡನೆಯನ್ನು ಗಾಂಧಿ ತತ್ವಗಳ ಚಿಂತನೆಯ ಭಾಗವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.





