ಭಾರತಕ್ಕೆ ಪಾಕಿಸ್ತಾನದಿಂದ ನಂ.1 ಸ್ಥಾನ ವಶಪಡಿಸಿಕೊಳ್ಳಲು ಇನ್ನೊಂದು ಗೆಲುವು ಅಗತ್ಯ
ಐಸಿಸಿ ಟೆಸ್ಟ್ ರ್ಯಾಂಕಿಂಗ್:

ದುಬೈ, ಸೆ.27: ಕೋಲ್ಕತಾದಲ್ಲಿ ಶುಕ್ರವಾರ ನ್ಯೂಝಿಲೆಂಡ್ ವಿರುದ್ಧ ಆರಂಭವಾಗಲಿರುವ ಎರಡನೆ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದರೆ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ವಶಪಡಿಸಿಕೊಳ್ಳುವ ಸಾಧ್ಯತೆಯಿದೆ.
ಕಾನ್ಪುರದಲ್ಲಿ ಆಡಿದ ತನ್ನ 500ನೆ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಭಾರತ ತಂಡ ಪಾಕಿಸ್ತಾನ ತಂಡದಿಂದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಗದೆಯನ್ನು ವಶಪಡಿಸಿಕೊಳ್ಳುವುದರಿಂದ ಇನ್ನು ಒಂದು ಗೆಲುವಿನಿಂದ ಹಿಂದುಳಿದಿದೆ. ಕಿವೀಸ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ಭಾರತ ತಂಡ ನಂ.1 ತಂಡ ಪಾಕಿಸ್ತಾನದಿಂದ ಕೇವಲ ಒಂದು ಅಂಕದಿಂದ ಹಿಂದುಳಿದಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ನಂ.1 ಪಟ್ಟದಿಂದ ಕೆಳಗಿಳಿಸಲು ಕೊಹ್ಲಿ ಪಡೆಗೆ ಇನ್ನು ಒಂದು ಪಂದ್ಯದಲ್ಲಿ ಗೆಲುವು ಸಾಧಿಸಬೇಕಾಗಿದೆ.
ಕಾನ್ಪುರ ಟೆಸ್ಟ್ ಪಂದ್ಯದ ಹೀರೊ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಐಸಿಸಿ ಬೌಲರ್‌ಗಳ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಸೋಮವಾರ ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 225 ರನ್‌ಗೆ 10 ವಿಕೆಟ್‌ಗಳನ್ನು ಕಬಳಿಸಿದ ಅಶ್ವಿನ್ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್‌ರನ್ನು ಒಂದು ಅಂಕದಿಂದ ಮುನ್ನಡೆ ಸಾಧಿಸಿದರು.
ಅಶ್ವಿನ್ ನಂ.1 ರ್ಯಾಂಕಿನಲ್ಲಿರುವ ದಕ್ಷಿಣ ಆಫ್ರಿಕದ ಡೇಲ್ ಸ್ಟೇಯ್ನಿರಿಂದ ಕೇವಲ 7 ಅಂಕಗಳಿಂದ ಹಿಂದಿದ್ದಾರೆ. ಕೋಲ್ಕತಾದಲ್ಲಿ ಅಶ್ವಿನ್ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದರೆ ಎರಡನೆ ಬಾರಿ ವಿಶ್ವದ ನಂ.1 ಬೌಲರ್ ಆಗುವ ಅವಕಾಶ ಸಿಗಲಿದೆ.
ಕಳೆದ ವರ್ಷ ಬಾಕ್ಸಿಂಗ್ ಡೇ ಟೆಸ್ಟ್‌ನ ಬಳಿಕ ಅಶ್ವಿನ್ ನಂ.1 ರ್ಯಾಂಕಿಗೆ ಏರಿದ್ದರು. ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಒಂದು ಸ್ಥಾನ ಭಡ್ತಿ ಪಡೆದು ದ್ವಿತೀಯ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್(906 ಅಂಕ) ನಂ.1 ಸ್ಥಾನದಲ್ಲಿದ್ದಾರೆ. ಭಾರತದ ಯುವ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ 5 ಸ್ಥಾನ ಮೇಲಕ್ಕೇರಿ 57ನೆ ಸ್ಥಾನ ತಲುಪಿದ್ದಾರೆ. ರೋಹಿತ್ ಶರ್ಮ 52ನೆ ಸ್ಥಾನಕ್ಕೇರಿದ್ದಾರೆ.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಜೀವನಶ್ರೇಷ್ಠ 450 ಅಂಕ ಗಳಿಸಿರುವ ಅಶ್ವಿನ್ ನಂ.1 ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.







