ಎಬಿ ಡಿವಿಲಿಯರ್ಸ್‌ಗೆ ಗಾಯದ ಸಮಸ್ಯೆ: ಆಸ್ಟ್ರೇಲಿಯ ವಿರುದ್ಧ ಸರಣಿಗೆ ಅಲಭ್ಯ

ಜೋಹಾನ್ಸ್‌ಬರ್ಗ್, ಸೆ.27: ದಕ್ಷಿಣ ಆಫ್ರಿಕದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮಣಿಕಟ್ಟಿನ ಗಾಯದ ಸಮಸ್ಯೆ ಎದುರಿಸುತ್ತಿರುವ ಕಾರಣ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಏಕದಿನ ಸರಣಿ ಹಾಗೂ ವಿದೇಶದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಡಿವಿಲಿಯರ್ಸ್ ಮುಂದಿನ ವಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಆರರಿಂದ 8 ವಾರಗಳ ಅಗತ್ಯವಿದೆ. ಇಂದು ಬೆಳಗ್ಗೆ ಫಿಜಿಯೋ ನಡೆಸಿದ ಫಿಟ್‌ನೆಸ್ ಟೆಸ್ಟ್‌ನಲ್ಲಿ ಡಿವಿಲಿಯರ್ಸ್ ವಿಫಲರಾಗಿದ್ದಾರೆ. ಅವರಿಗೆ ಬ್ಯಾಟಿಂಗ್‌ನ ವೇಳೆ ಮಣಿಕಟ್ಟಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಅವರು ಮುಂದಿನ ವಾರ ಆಪರೇಶನ್‌ಗೆ ಒಳಗಾಗಲಿದ್ದಾರೆ ಎಂದು ದಕ್ಷಿಣ ಆಫ್ರಿಕದ ಮ್ಯಾನೇಜರ್ ಮುಹಮ್ಮದ್ ಮೂಸಾಜಿ ಹೇಳಿದ್ದಾರೆ.
ಡಿವಿಲಿಯರ್ಸ್ ಸೆ.30 ರಿಂದ ಸ್ವದೇಶದಲ್ಲಿ ಆರಂಭವಾಗಲಿರುವ ಆಸೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿ ಹಾಗೂ ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಲಭ್ಯವಿರುವುದಿಲ್ಲ. ಆಗಸ್ಟ್‌ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಡಿವಿಲಿಯರ್ಸ್ ಆಡಿರಲಿಲ್ಲ.





