ಮಹಿಳೆಯರ ಬಿಗ್‌ಬಾಶ್ ಲೀಗ್ ಗೆ ಸ್ಮೃತಿ ಮಂಧಾನಾ

ಮೆಲ್ಬೋರ್ನ್, ಸೆ.27: ಭಾರತದ ಅಗ್ರ ಕ್ರಮಾಂಕದ ಕ್ರಿಕೆಟ್ ಆಟಗಾರ್ತಿ ಸ್ಮತಿ ಮಂಧಾನಾ ಡಬ್ಲುಬಿಬಿಎಲ್‌ನಲ್ಲಿ ಬ್ರಿಸ್ಬೇನ್ ಹೀಟ್ ಫ್ರಾಂಚೈಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮಂಧಾನಾ ಮಹಿಳೆಯರ ಬಿಗ್‌ಬಾಶ್ ಲೀಗ್‌ನಲ್ಲಿ ಆಡುತ್ತಿರುವ ಭಾರತದ ಎರಡನೆ ಆಟಗಾರ್ತಿ.
ಭಾರತದ ಆಲ್‌ರೌಂಡರ್ ಹಾಗೂ ಉಪ ನಾಯಕಿ ಹರ್ಮನ್‌ಪ್ರೀತ್ ಕೌರ್ ಈಗಾಗಲೇ ಡಬ್ಲುಬಿಬಿಎಲ್‌ನ ಹಾಲಿ ಚಾಂಪಿಯನ್ ಸಿಡ್ನಿ ಥಂಡರ್ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಹೀಟ್ ತಂಡದಲ್ಲಿ ಆಸ್ಟ್ರೇಲಿಯದ ಆಟಗಾರ್ತಿಯರೊಂದಿಗೆ ಆಡಲು ನಾನು ಎದುರು ನೋಡುತ್ತಿರುವೆ. ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಭಾರತ ಹಾಗೂ ಆಸ್ಟ್ರೇಲಿಯದಲ್ಲಿ ಹೆಚ್ಚಿನ ಹುಡುಗಿಯರು ಎಳೆಯ ವಯಸ್ಸಿನಲ್ಲಿ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಸ್ಫೂರ್ತಿಯಾಗುವ ವಿಶ್ವಾಸದಲ್ಲಿದ್ದೇನೆ ಎಂದು ಸ್ಮತಿ ಮಂಧಾನಾ ತಿಳಿಸಿದ್ದಾರೆ.
ಭಾರತ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದಾಗ ಸ್ಮತಿ ಹೊಬರ್ಟ್‌ನಲ್ಲಿ ಸದರ್ನ್ ಸ್ಟಾರ್ಸ್ ವಿರುದ್ಧ ಚೊಚ್ಚಲ ಏಕದಿನ ಶತಕ ಬಾರಿಸಿದ್ದರು. 16ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದ ಎಡಗೈ ಆಟಗಾರ್ತಿ ಸ್ಮತಿ 2014ರಲ್ಲಿ ಇಂಗ್ಲೆಂಡ್‌ನ ವಿರುದ್ಧ ಚೊಚ್ಚಲ ಟೆಸ್ಟ್‌ನಲ್ಲಿ 51 ರನ್ ಗಳಿಸಿ ವಿಶ್ವದ ಗಮನ ಸೆಳೆದಿದ್ದರು.
ಸ್ಮತಿ ಭಾರತದ ಪರ 2 ಟೆಸ್ಟ್, 20 ಏಕದಿನ ಹಾಗೂ 20 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.





