ಕೆಎಸ್ಸಾರ್ಟಿಸಿ ನಿರ್ವಾಹಕನ ಆತ್ಮಹತ್ಯೆ: ಪ್ರತಿಭಟನೆ

ಮಂಗಳೂರು, ಸೆ. 27: ಚಿಲ್ಲರೆ ಹಣದ ವಿಚಾರಕ್ಕೆ ಸಂಬಂಧಿಸಿ ಪ್ರಯಾಣಿಕ ಯುವತಿ ಮಾಡಿದ ಆರೋಪಕ್ಕೆ ಮನನೊಂದು ಚಲಿಸುತ್ತಿದ್ದ ಬಸ್ಸಿನಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಸ್‌ನಿರ್ವಾಹಕ ಪ್ರಕರಣ ಸಂಬಂಧ ಮಂಗಳವಾರ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಕೆಸ್ಸಾರ್ಟಿಸಿ ನೌಕರರ ಯೂನಿಯನ್ ಸಹಿತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಯೂನಿಯನ್ ಅಧ್ಯಕ್ಷ ಪ್ರವೀಣ್ ಮಾತನಾಡಿ, ದೇವದಾಸ್ ಶೆಟ್ಟಿಯವರು ಪ್ರಾಮಾಣಿಕ ಕಂಡಕ್ಟರ್ ಆಗಿದ್ದು, ವಿನಾಕಾರಣ ವಿವಾದದಿಂದಾಗಿ ನೊಂದುಕೊಂಡು ನದಿಗೆ ಹಾರಿದ್ದಾರೆ. ಪ್ರಕರಣದಲ್ಲಿ ಕಡಬ ಠಾಣಾ ಪೊಲೀಸರು ಏಕಪಕ್ಷೀಯವಾಗಿ ವರ್ತಿಸಿದ್ದು, ಯುವತಿಯ ಹೇಳಿಕೆಯನ್ನೇ ಆಧರಿಸಿ ನಿರ್ವಾಹಕರ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ಪೊಲೀಸರು ಥಳಿಸಿದ್ದಾರೆ. ನಿರ್ವಾಹಕನ ತಪ್ಪಿಲ್ಲದಿದ್ದರೂ ನಿರ್ವಾಹಕರ ಕಿಸೆಯಲ್ಲಿದ್ದ ಅವರ ಹಣವನ್ನು ಯುವತಿಗೆ ನೀಡಲಾಗಿದೆ. ಇದರಿಂದಲೇ ನೊಂದು ನಿರ್ವಾಹಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಆತ್ಮಹತ್ಯೆ ಮಾಡಿಕೊಂಡಿರುವ ದೇವದಾಸ್ ಸಾವಿಗೆ ನ್ಯಾಯ ಸಿಗಬೇಕು ಎಂದು ಡಿವೈಎಫ್ಐ, ಇಂಟಕ್ ಹಾಗೂ ಕೆಎಸ್ಸಾರ್ಟಿಸಿ ನೌಕರರ ಸಂಘ, ಎಐಟಿಯುಸಿ ಸಂಘಟನೆಗಳ ಪದಾಧಿಕಾರಿಗಳು ಮತುತಿ ಕಾರ್ಯಕರ್ತರು ಪ್ರತಿಭಟನಾ ನಡೆಸಿದರು.
ಸಿಪಿಐಎಂ ಮುಖಂಡ ಸುನೀಲ್ ಬಜಾಲ್, ಇಂಟಕ್ ಪ್ರಮುಖ ಶಶಿರಾಜ್ ಅಂಬಟ್, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.





