ಉಡುಪಿ: ಮರಳು ಸಮಸ್ಯೆ ಮುಂದುವರಿದ ಉಪವಾಸ ಧರಣಿ
ಉಡುಪಿ, ಸೆ.27: ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿ ಷ್ಟಾವಧಿ ಉಪವಾಸ ಧರಣಿ ಇಂದು ಎರಡನೆ ದಿನಕ್ಕೆ ಕಾಲಿಟ್ಟಿದೆ. ಇಂದು ಧರಣಿಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಈ ಸಂದರ್ಭ ಸಂಘದ ಜಿಲ್ಲಾಧ್ಯಕ್ಷ ಶೇಖರ್ ಬಂಗೇರ, ಕಾರ್ಯದರ್ಶಿ ವಿಠಲ ಪೂಜಾರಿ, ಸಿಐಟಿಯುವ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್, ಸುರೇಶ್ ಕಲ್ಲಾಗರ್, ಯು.ದಾಸ ಭಂಡಾರಿ, ರಾಮ ಕರ್ಕಡ, ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಉಸ್ತುವಾರಿ ಕಚೇರಿ ಮುತ್ತಿಗೆ: ಮರಳು ಸಮಸ್ಯೆಗೆ ಸಂಬಂಧಿಸಿ ಧರಣಿ ನಡೆಸುತ್ತಿದ್ದರೂ ಈವರೆಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರ ಕಚೇರಿಗೆ ಸೆ.28ರಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸ ಲಿದ್ದಾರೆ.
ಉಪವಾಸ ಧರಣಿ ನಡೆಸುತ್ತಿರುವ ಸ್ಥಳದಿಂದ ಪೂರ್ವಾಹ್ನ 11 ಗಂಟೆಗೆ ಮೆರವಣಿಗೆ ಹೊರಟು ಉಡುಪಿ ತಾಪಂ ಕಚೇರಿಯಲ್ಲಿರುವ ಪ್ರಮೋದ್‌ರ ಕಚೇರಿ ಎದುರು ಧರಣಿ ನಡೆಸ ಲಾಗುವುದು ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.





