ಸರ್ವಪಕ್ಷ ಸಭೆಯಲ್ಲಿ ಯಾವುದೇ ನಿರ್ಧಾರ ಇಲ್ಲ; ಕೇಂದ್ರ ಸರಕಾರದ ಸಭೆಯ ಬಳಿಕ ಮುಂದಿನ ಹೆಜ್ಜೆ

ಬೆಂಗಳೂರು, ಸೆ.28: ನಾಳೆಯವರೆಗೂ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಸರ್ವಪಕ್ಷ ಸಭೆಯಲ್ಲಿ ಇಂದು ಸರಕಾರಕ್ಕೆ ಪ್ರತಿಪಕ್ಷಗಳು ಸಲಹೆ ನೀಡಿದೆ. ಆದರೆ ಸರ್ವಪಕ್ಷ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ
ಮೂರು ದಿನಗಳ ಕಾಲ ತಮಿಳುನಾಡಿಗೆ ಹದಿನೆಂಟು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಖಡಕ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ನಿರ್ಧಾರ ಕೈಗೊಳ್ಳಲು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಸರಕಾರದ ಬೆಂಬಲಕ್ಕೆ ಪ್ರತಿಪಕ್ಷಗಳು ನಿಂತಿದೆ.
ಕೇಂದ್ರ ಸರಕಾರದ ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಂಡರೆ ಉತ್ತಮ. ಇದರಿಂದ ಕೇಂದ್ರ ಸರಕಾರಕ್ಕೂ ಗೌರವ ನೀಡಿದಂತಾಗುತ್ತದೆ ಎಂದು ವಿವಿಧ ಪಕ್ಷಗಳ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯುತ್ತಿದೆ.ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಆದೇಶ ಮಾರ್ಪಾಡು ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ನಡೆಸಿತ್ತು. ವಿಭಾಗೀಯ ಪೀಠ ನೀಡಿದ ಆದೇಶದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ ,ಸೆ.28ರಂದ 30ರ ತನಕ ಹದಿನೆಂಟು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಿತ್ತು.





