ಬೀದಿ ನಾಯಿಯಿಂದ ಪಾರಾದ ಯುವಕನನ್ನು ಕಾನೂನು ಕಚ್ಚಿತು !

ಚೆನ್ನೈ, ಸೆಪ್ಟಂಬರ್ 28: ಕಚ್ಚಲು ಓಡಿಬಂದ ಬೀದಿನಾಯಿಯಿಂದ ಪಾರಾಗಲು ಕಲ್ಲೆಸೆದ ಯುವಕನೊಬ್ಬನಿಗೆ 5000ರೂಪಾಯಿ ದಂಡ ವಿಧಿಸಲಾದ ವಿಲಕ್ಷಣ ಘಟನೆಯೊಂದು ಚೆನ್ನೈ ಮಧೂರವೊಯಲ್ ಎಂಬಲ್ಲಿಂದ ವರದಿಯಾಗಿದೆ.
ಕುಡಿಯುವ ನೀರು ಸರಬರಾಜು ಕೆಲಸ ಮಾಡುವ ವಿನೋದ್ ಕುಮಾರ್ ಎಂಬಾತನನ್ನು ಬೀದಿನಾಯಿ ಕಚ್ಚಲು ಬಂದಾಗ ಅದರಿಂದ ಪಾರಾಗಲು ಕಲ್ಲೆತ್ತಿ ಬಿಸಾಡಿದ್ದನು. ಐದು ವರ್ಷ ಪ್ರಾಯದ ಬೀದಿ ನಾಯಿಯ ಕಣ್ಣಿನ ಮೇಲ್ಭಾಗಕ್ಕೆ ಕಲ್ಲು ತಾಗಿ ಗಾಯವಾಗಿತ್ತು. ಕಳೆದ ಶನಿವಾರ ರಾತ್ರಿ 8:30ಕ್ಕೆ ಈ ಘಟನೆ ನಡೆದಿದ್ದು, ಇವ್ಯಾವುದರ ಪರಿವೆಯಿಲ್ಲದೆ ವಿನೋದ್ ತನ್ನ ಕೆಲಸದಲ್ಲಿ ನಿರತನಾಗಿದ್ದ.ಆದರೆ ಸಮೀಪ ನಿವಾಸಿಗಳಾದ ಕೆಲವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ನಂತರ ಪೊಲೀಸರು ಬೀದಿನಾಯಿಯನ್ನು ಹಿಡಿದು ಮದ್ರಾಸ್ ವೆಟರ್ನರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಈ ನಡುವೆ ಸಾಕುಪ್ರಾಣಿಗಳ ಸೇವೆ ಮಾಡುವ ಕಮಲ್ ಬಂಗಾರ್ ಎಂಬವರು ಮಧುರವೊಯಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡ ಪೊಲೀಸರು ಪರಿಸರ ನಿವಾಸಿಗಳ ಸಾಕ್ಷ್ಯ ಪ್ರಕಾರ ವಿನೋದ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು.
ಠಾಣೆಗೆ ಹೋದಮೇಲೆಯೇ ವಿನೋದ್‌ಗೆ ತನ್ನ ಅಪರಾಧವೇನು ಮತ್ತು ಅದೆಷ್ಟು ಗಂಭೀರವಾದುದೆಂದು ಅರಿವಾಗಿತ್ತು. ನಂತರ ಠಾಣೆಯಲ್ಲಿ ರಾಜಿಪಂಚಾಯಿತಿ ನಡೆದು ನಾಯಿಯ ಚಿಕಿತ್ಸೆಗೆ ಐದುಸಾವಿರ ರೂಪಾಯಿ ದಂಡ ಪಾವತಿಸಬೇಕು ಮತ್ತು ಬ್ಲೂಕ್ರೋಸ್ ಎಂಬ ಪ್ರಾಣಿಪ್ರಿಯರ ಸಂಘಟನೆಯವರೊಂದಿಗೆ ನಾಲ್ಕು ದಿವಸ ಉಚಿತವಾಗಿ ಕೆಲಸ ಮಾಡಬೇಕೆಂಬ ಒಡಂಬಡಿಕೆಯನ್ನು ವಿನೋದ್ ಮಾಡಿಕೊಳ್ಳಬೇಕಾಯಿತು. ಮಾತ್ರವಲ್ಲ ಇನ್ನೆಂದೂ ತಾನು ನಾಯಿಗೆ ಕಲ್ಲೆಸೆಯುವುದಿಲ್ಲ ಎಂದು ಕ್ಷಮಾಪಣಾ ಪತ್ರವನ್ನು ಪೊಲೀಸರು ಬರೆಯಿಸಿಕೊಂಡಿದ್ದಾರೆ. ಇನ್ನು ನಾಯಿ ಕಚ್ಚಿದರೆ ತನಗೆ ಓಡಿಹೋಗಿ ಪಾರಾಗುವುದಕ್ಕೂ ಸಾಧ್ಯವಿರಲಿಲ್ಲ ಎಂದು ವಿನೋದ್ ದೂರಿದ್ದಾರೆಂದು ವರದಿ ತಿಳಿಸಿದೆ.







