ಈ ಖ್ಯಾತ ನಿರ್ದೇಶಕರ ಪ್ರಕಾರ ಇದು ಶಾರುಖ್ ಯಶಸ್ಸಿನ ರಹಸ್ಯ !

ಮುಂಬೈ, ಸೆ.28: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಯಶಸ್ಸಿನ ಹಿಂದಿನ ರಹಸ್ಯವೇನು ಗೊತ್ತೇ ? ಚಿತ್ರ ನಿರ್ಮಾತೃ ಅನುರಾಗ್ ಕಶ್ಯಪ್ ಪ್ರಕಾರ ಶಾರುಖ್ ಅವರಲ್ಲಿ ಇತರ ಸೂಪರ್ ಸ್ಟಾರ್ ಗಳಲ್ಲಿರುವಂತೆ ಅಹಂ ಎಂಬುದಿಲ್ಲ. ‘‘ಶಾರುಖ್ ಚಿತ್ರರಂಗ ಪ್ರವೇಶಿದ ನಂತರ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟ ಹಲವರಿಗೆ ಶಾರುಖ್ ಅವರಂತೆಯೇ ಯಶಸ್ಸು ಕಾಣದೇ ಇರಲು ಅವರಲ್ಲಿದ್ದ ಅಹಂ ಕಾರಣವಾಗಿದೆ’’ ಎಂಬುದು ಕಶ್ಯಪ್ ಅವರ ಸ್ಪಷ್ಟ ನುಡಿ.
’’ಶಾರುಖ್ ಅವರು ದೆಹಲಿಯಲ್ಲಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಆದರೂ ಅವರೊಬ್ಬ ಸ್ಟಾರ್ ಆದರು. ಆದರೆ ಅವರ ನಂತರ ಬಂದವರು ಸ್ಟಾರ್ ಆಗಿಲ್ಲ. ಅವರು ರಂಗಭೂಮಿಯಲ್ಲಿ ಸಣ್ಣ ಪಾತ್ರಗಳನ್ನು ಮಾಡುತ್ತಿದ್ದರು. ಆದರೆ ದೊಡ್ಡ ಪಾತ್ರಗಳನ್ನು ಮಾಡಿದವರು ಸ್ಟಾರ್ ಆಗಲಿಲ್ಲ. ಸ್ಟಾರ್ ಆಗುವುದು ಬೇರೆಯೇ ವಿಚಾರ, ನಟನೆ ಬೇರೆಯೇ ವಿಚಾರ’’ಎನ್ನುತ್ತಾರೆ ಕಶ್ಯಪ್.
‘‘ಜನರು ನಟರಾದಾಗ ಅವರು ತಾವು ನಟನೆಯ ಮೂಲಕ ಮೂರನೇ ವ್ಯಕ್ತಿಯ ತರಹ ಕಾಣಬೇಕೆಂದು ಬಯಸುತ್ತಾರೆ. ಹಲವು ನಟರು ಚಿತ್ರರಂಗದಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳುವ ಮೊದಲೇ ಇನ್ನೊಬ್ಬರೊಂದಿಗೆ ತಮ್ಮನ್ನು ಹೋಲಿಕೆ ಮಾಡಲು ಆರಂಭಿಸುವುದರಿಂದ ಅವರಿಗೆ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ’’ ಎಂದು ಅವರು ಹೇಳಿದರು.
‘‘ನಾನು ಒಬ್ಬನೇ ನಟನನ್ನು ಮತ್ತೆ ಮತ್ತೆ ನನ್ನ ಚಿತ್ರಗಳಿಗೆ ಆಯ್ಕೆ ಮಾಡುವುದಿಲ್ಲ. ಪಾತ್ರಗಳಿಗೆ ತಕ್ಕ ನಟರನ್ನು ನಾನು ಹುಡುಕುತ್ತೇನೆ, ನರನ್ನು ಆಯ್ಕೆ ಮಾಡುವುದೂ ಒಂದು ಕಲೆ. ಒಂದು ಪಾತ್ರ, ಆ ಪಾತ್ರಧಾರಿ ಹಾಗೂ ಆತನ ಪ್ರತಿಭೆ ಹೊಂದದೇ ಹೋದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ’’ ಎಂದು ನುಡಿಯುತ್ತಾರೆ ಕಶ್ಯಪ್.
ತಾವು ಮಾಡುವ ಚಿತ್ರಗಳು ಸಣ್ಣ ಬಜೆಟ್ ಚಿತ್ರಗಳಾಗಿರುವುದರಿಂದ ತಾವು ಹೊಸಬರನ್ನು ಆರಿಸುವುದಾಗಿ ಕಶ್ಯಪ್ ಹೇಳುತ್ತಾರಲ್ಲದೆ ‘‘ಈ ಹೊಸಬರೊಂದಿಗೆ ರಸ್ತೆಯಲ್ಲಿ ಚಿತ್ರೀಕರಣ ನಡೆಸುವಾಗ ಯಾರೂ ಅವರನ್ನು ಗುರುತಿಸುವುದಿಲ್ಲ’’ಎಂದರು.





