ಯೋಗ ಶಿಕ್ಷಕರಿಗೆ ವಿಶೇಷ ಪ್ರಮಾಣ ಪತ್ರ: ಅಜಿತ್ ಎಂ.ಶರಣ್
ಉಜಿರೆ ಶ್ರೀಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ

ಬೆಳ್ತಂಗಡಿ, ಸೆ.28: ಯೋಗ ಶಿಕ್ಷಕರಿಗೆ ಇಂದು ಜಗತ್ತಿನಾದ್ಯಂತ ಬೇಡಿಕೆ ಇದೆ. ಹೀಗಾಗಿ ಕೇಂದ್ರ ಸರಕಾರ ಅವರಿಗೆ ವಿಶೇಷ ಪ್ರಮಾಣ ಪತ್ರ ನೀಡಲಿದೆ ಎಂದು ಕೇಂದ್ರ ಆಯುಷ್ ಮಂತ್ರಾಲಯದ ಕಾರ್ಯದರ್ಶಿ ಅಜಿತ್ ಎಂ.ಶರಣ್ ಹೇಳಿದ್ದಾರೆ.
ಅವರು ಬುಧವಾರ ಉಜಿರೆ ಶ್ರೀಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ 23ನೆ ಪದವಿ ಪ್ರದಾನ ಸಮಾರಂಭದಲ್ಲಿ 10 ಸ್ನಾತಕೋತ್ತರ, 71 ಪದವಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಯೋಗ ಶಿಕ್ಷಕರನ್ನು ಗುರುತಿಸುವ ಉದ್ದೇಶದಿಂದ ಅವರಿಗೆ ಪ್ರಮಾಣ ಪತ್ರ ನೀಡುವ ಯೋಜನೆ ಸಿದ್ಧಗೊಂಡಿದೆ. ಈ ಪ್ರಮಾಣ ಪತ್ರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉಪಯೋಗಕರವಾಗಲಿದೆ ಎಂದವರು ವಿವರಿಸಿದರು.
ಆಯುಷ್ ಸಚಿವಾಲಯ ಪ್ರಕೃತಿ ಹಾಗೂ ಯೋಗ ವಿಜ್ಞಾನದ ಬೆಳವಣಿಗೆಗೆ ಎಲ್ಲಾ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಕಲ ರೂಪುರೇಷೆಗಳನ್ನು ಸಿದ್ಧಗೊಳಿಸಿ ಕಾರ್ಯರೂಪಕ್ಕಿಳಿದಿದೆ. ಈ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೋಸ್ಕರ ಈಗಾಗಲೇ ರಾಜ್ಯದ ನಾಗಮಂಗಲದಲ್ಲಿ ಕೇಂದ್ರೀಯ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗಿದ್ದು ಮೊದಲ ಹಂತದ ಕಾರ್ಯ ಮುಗಿದಿದೆ. ಸಂಶೋಧಕರಿಗೆ ಫೆಲೋಶಿಪ್ ನೀಡಲಾಗುತ್ತದೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಯನ್ನು ನೀಡುವ ಆಸ್ಪತ್ರೆಗಳಿಗೆ ಎಕ್ರಿಡೀಯೇಶನ್ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಆಯುಷ್ ಮಂತ್ರಾಲಯದ ಜಂಟಿ ಸಲಹೆಗಾರ ಡಾ.ಈಶ್ವರ್ ಎನ್. ಆಚಾರ್ಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಪ್ರಭಾಕರ್, ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಉಪಸ್ಥಿತರಿದ್ದರು.
ಇದೇ ವೇಳೆ ವಿವಿಧ ಸಂಸ್ಥೆಗಳು ಪ್ರಾಯೋಜಿತ ವಿದ್ಯಾರ್ಥಿ ವೇತನಗಳನ್ನು ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಾ.ರಾಜೇಶ್ ಕೆ. ಸಿಂಗ್ ಸಂಪಾದಿಸಿದ ಕೃತಿಯೊಂದನ್ನು ಬಿಡುಗಡೆ ಮಾಡಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಡಾ.ಚಂದ್ರಕಾಂತ್ ಕೆ.ಕೆ.ಮತ್ತು ಜ್ಯೋತ್ಸ್ನಾ ಕಾರ್ಯಕ್ರಮ ನಿರ್ವಹಿಸಿದರು.





