‘ಉಡುಪಿ ಬಯಲು ಶೌಚ ಮುಕ್ತ ನಗರ’ ಪ್ರಮಾಣ ಪತ್ರ ಪ್ರದಾನ

ಉಡುಪಿ, ಸೆ.28: ಸ್ವಚ್ಛ ಭಾರತ್ ಅಭಿಯಾನದಡಿ ಉಡುಪಿ ನಗರವನ್ನು ಬಯಲು ಶೌಚ ಮುಕ್ತ ನಗರವನ್ನಾಗಿ ಘೋಷಿಸಲಾಗಿದ್ದು, ಇದರ ಪ್ರಮಾಣ ಪತ್ರವನ್ನು ಬುಧವಾರ ಉಡುಪಿ ನಗರಸಭೆಗೆ ಪ್ರದಾನ ಮಾಡಲಾಯಿತು.
ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಸ್ವಚ್ಛ ಭಾರತ್ ಅಭಿಯಾನ- ಬಯಲು ಶೌಚಮುಕ್ತ ಯೋಜನೆ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ನವದೆಹಲಿ ಇದರ ಮುಖ್ಯಸ್ಥ ಅಭಿನವ್ ಯಾದವ್ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಇದು ಕೇವಲ ಒಂದೆರಡು ದಿನಗಳ ಕೆಲಸ ಅಲ್ಲ. ಹಲವು ವರ್ಷಗಳ ಶ್ರಮ ಇದರಲ್ಲಿದೆ. ಅದೇ ರೀತಿ ಈ ಪ್ರಕ್ರಿಯೆಯು ಇದೇ ರೀತಿ ಮುಂದು ವರಿಯುವ ಮೂಲಕ ನಗರವನ್ನು ಶೌಚಮುಕ್ತವಾಗಿ ಉಳಿಸಿಕೊಳ್ಳಬೇಕು. ಈ ಸಾಧನೆಗೆ ನಗರದ ವಿದ್ಯಾರ್ಥಿಗಳು, ಮಕ್ಕಳು, ಪ್ರತಿ ನಾಗರಿಕರು ಕೂಡ ಕಾರಣಕರ್ತರಾಗಿದ್ದಾರೆ ಎಂದು ಅಭಿನವ್ ಯಾದವ್ ತಿಳಿಸಿದರು.
ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ, ಈ ಅಭಿಯಾನಕ್ಕೆ ಎಸ್‌ಸಿ/ಎಸ್‌ಟಿಯ ಶೇ.24.1ರ ನಿಧಿ, ಇತರ ವರ್ಗದವರ ಶೇ.7.25ರ ನಿಧಿ ಮತ್ತು ವಿಕಲಚೇತನರ ಶೇ.3ರ ನಿಧಿ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಸ್ವಚ್ಛ ಭಾರತ ಅಭಿಯಾನದ ಅನುದಾನದಿಂದ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಜಾಗದ ಕೊರತೆ ಇರುವಲ್ಲಿ ಒಟ್ಟು 101 ಸಮುದಾಯ ಶೌಚಾಲಯ, 65 ಬಡಕುಟುಂಬಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ 56 ಸಮುದಾಯ ಶೌಚಾ ಲಯಗಳನ್ನು ನಿರ್ಮಿಸಲಾಗುತ್ತಿದೆ. ಹೆಚ್ಚುವರಿ ಶೌಚಾಲಯಕ್ಕಾಗಿ 40ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ಖಾಸಗಿ ಸ್ಥಳಗಳಲ್ಲಿ ನೆಲಬಾಡಿಗೆ ಆಧಾರದಲ್ಲಿ ವಾಸವಾಗಿರುವ ವಲಸೆ ಕಾರ್ಮಿಕರಿಗೆ ಜನಸಂಖ್ಯೆ ಆಧಾರದಲ್ಲಿ ಶೌಚಾಲಯ ನಿರ್ಮಿಸಿಕೊಡುವಂತೆ ಆಯಾ ಜಾಗ ಮಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪೌರಾಯುಕ್ತ ಡಿ.ಮಂಜುನಾಥಯ್ಯ ಮಾತನಾಡಿ, ರಾಜ್ಯದ 57 ನಗರಸಭೆ ಗಳ ಪೈಕಿ ಉಡುಪಿ ನಗರಸಭೆ ಪ್ರಥಮ ಬಯಲು ಶೌಚಮುಕ್ತ ನಗರಸಭೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಶೌಚಾಲಯ ಬಳಸುವ ಕುರಿತು ನಗರದ 73 ಶಾಲೆಗಳಿಂದ 20953 ವಿದ್ಯಾರ್ಥಿಗಳು, ಶೈಕ್ಷಣಿಕ ಸಂಸ್ಥೆಗಳ 1329 ಉದ್ಯೋಗಿಗಳು, 140 ಸ್ವಸಹಾಯ ಸಂಘಗಳು, 1378 ಸ್ವಸಹಾಯ ಸಂಘ ಗಳ ಸದಸ್ಯರುಗಳಿಂದ ಪ್ರಮಾಣಪತ್ರವನ್ನು ಪಡೆದು ದೆಹಲಿಗೆ ಕಳುಹಿಸಿಕೊಡ ಲಾಗಿತ್ತು. ಈ ಕುರಿತು ಅಲ್ಲಿಂದ ಬಂದ ತಂಡ ಇದನ್ನು ಪರಿಶೀಲಿಸಿ ಈ ಘೋಷಣೆಯನ್ನು ಮಾಡಿದೆ ಎಂದು ಹೇಳಿದರು.
ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಭಟ್, ಮಾಜಿ ಅಧ್ಯಕ್ಷ ಯುವರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಪುರಂದರ ಕೋಟ್ಯಾನ್, ವಾರ್ತಾಧಿಕಾರಿ ರೋಹಿಣಿ ಉಪಸ್ಥಿತರಿದ್ದರು. ಪರಿಸರ ಅಭಿಯಂತರ ರಾಘವೇಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.







