ಮದ್ಯವರ್ಜನ ಶಿಬಿರದಿಂದ ಪರಿವರ್ತನೆ ಸಾಧ್ಯ : ಶ್ರೀಪತಿ ಭಟ್
.gif)
ಮೂಡುಬಿದಿರೆ, ಸೆ.28: ಮದ್ಯ ವ್ಯಸನಕ್ಕೆ ಬಲಿಯಾದವರನ್ನು ವ್ಯಸನದಿಂದ ಹೊರತರವುದು ಕಷ್ಟಕರವಾದ ಕೆಲಸ. ಶಿಬಿರಗಳಿಂದ ಮದ್ಯವ್ಯಸನಿಗಳ ಮನಃ ಪರಿವರ್ತನೆ ಮಾಡಿ ಸಂಸ್ಕಾರದ ಜತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಶ್ರೀಪತಿ ಭಟ್ ಹೇಳಿದರು.
ಮೂಡುಬಿದಿರೆ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಬುಧವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮದ್ಯವರ್ಜನ ಶಿಬಿರದ ಮೂಲಕ ದುಶ್ಚಟಗಳಿಂದ ವ್ಯಸನಿಗಳನ್ನು ಮುಕ್ತಗೊಳಿಸಿ ಪುನರ್ಜನ್ಮ ನೀಡುವ ಕೆಲಸವನ್ನು ಡಾ.ಹೆಗ್ಗಡೆಯವರು ಮಾಡುತ್ತಿರುವುದು ಶ್ಲಾಘನೀಯ ಎಂದರು.
ರಾಜೇಶ್ವರಿ ಇನ್ಫ್ರಾಟೆಕ್‌ನ ಪ್ರವರ್ತಕ ದೇವಿ ಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹಿಂದೆ ಸಾಮೂಹಿಕವಾಗಿ ಜನರು ಮದ್ಯ ವ್ಯಸನಿಗಳಾಗಿರಲಿಲ್ಲ. ಮನೆಯಲ್ಲಿ ನಡೆಯುವ ಸಮಾರಂಭಗಳಲ್ಲಿ ಆರಂಭವಾದ ಈ ಪದ್ಧತಿ ಇಂದು ವಿಸ್ತಾರಗೊಂಡಿದೆ. ಇಂತಹ ಪದ್ಧತಿಗಳಿಂದ ಜನರು ಹೊರಬರಬೇಕಾಗಿದೆ. ಇಂದು ರಾಜ್ಯದ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಗಳ ಬಗ್ಗೆ ಸರಕಾರಗಳು ನಿರ್ಲಕ್ಷಿಸಿರಬಹುದು. ಆದರೆ ಹಳ್ಳಿ ಹಳ್ಳಿಗಳಲ್ಲಿ ಮದ್ಯಪಾನ ಮಾರಾಟ ಮಾಡಲು ಅವಕಾಶ ನೀಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಮೂಡುಬಿದಿರೆ ಶ್ರೀ ಧವಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ರವೀಶ್ ಕುಮಾರ್, ಮೂಡುಬಿದಿರೆ ಪುರಸಬಾ ಸದಸ್ಯ ದಿನೇಶ್ ಪೂಜಾರಿ, ರೋಟರಿ ಕ್ಲಬ್ ಆಫ್ ಮಿಡ್ ಟೌನ್ ಆಧ್ಯಕ್ಷ ಧೀರಜ್ ಕುಮಾರ್, ಧರ್ಮಸ್ಥಳ ಯೋಜನೆಯ ಮೂಡುಬಿದಿರೆ ವಲಯಾಧ್ಯಕ್ಷ ನಾರಾಯಣ ಪೂಜಾರಿ, ಮಾರ್ಪಾಡಿ ಒಕ್ಕೂಟದ ಅಧ್ಯಕ್ಷೆ ಸುಮನಾ ಆಚಾರ್ಯ, ಜ್ಯೋತಿನಗರ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ್, ತಿಪ್ಲೆಬೆಟ್ಟು ಒಕ್ಕೂಟದ ಅಧ್ಯಕ್ಷ ಕರುಣಾಕರ, ಪೂಪಾಡಿಕಲ್ಲು ಒಕ್ಕೂಟದ ಅದ್ಯಕ್ಷ ಕೃಷ್ಣ ವೇದಿಕೆಯಲ್ಲಿದ್ದರು.
ಸೇವಾ ಪ್ರತಿನಿಧಿ ಅನಿತಾ ಬಳ್ಳಾಲ್ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ವಲಯದ ಮೇಲ್ವಿಚಾರಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಮೋಹಿನಿ ವಂದಿಸಿದರು.







