ಮುಂದುವರಿದ ‘ಮರಳಿಗಾಗಿ ಧರಣಿ’ ಸತ್ಯಾಗ್ರಹ
ಉಡುಪಿ, ಸೆ.28: ಮರಳುಗಾರಿಕೆಗೆ ಸಂಬಂಧಿಸಿದಂತೆ ಚೆನ್ನೈ ಹಸಿರು ಪೀಠ ಮತ್ತು ರಾಜ್ಯ ಹೈಕೋರ್ಟ್‌ನಲ್ಲಿರುವ ತಡೆಯಾಜ್ಞೆ ತೆರವು ಗೊಳಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು ಮೂರನೆ ದಿನವನ್ನು ಪೂರ್ಣಗೊಳಿಸಿತು.
ಕಳೆದ 2 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಧರಣಿ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಇಂದು ಶಾಸಕರ ಕಚೇರಿ ಚಲೋ ಕಾರ್ಯಕ್ರಮವನ್ನು ನಡೆಸಲು ಧರಣಿನಿರತರು ನಿರ್ಧರಿಸಿದ್ದರು. ಆದರೆ ಜಿಲ್ಲಾಡಳಿತ ಸಚಿವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಸಂಘದ ಮುಖಂಡರ ಜತೆ ಮಾತನಾಡಿಸಿದರು.
ತಡೆಯಾಜ್ಞೆ ತೆರವಿಗೆ ರಾಜ್ಯ ಸರಕಾರ ಪ್ರಯತ್ನ ನಡೆಸುತ್ತಿದ್ದು, ಬೆಂಗಳೂರಿ ನಿಂದ ಬಂದ ತಕ್ಷಣ ಧರಣಿ ಸ್ಥಳಕ್ಕೆ ಬಂದು ಮಾತುಕತೆ ನಡೆಸುವುದಾಗಿ ಸಚಿವರು ದೂರವಾಣಿ ಮೂಲಕ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಶಾಸಕರ ಕಚೆೇರಿ ಚಲೋ ಹೋರಾಟ ಕೈಬಿಟ್ಟು ಧರಣಿ ಸತ್ಯಾಗ್ರಹವನ್ನು ಮುಂದುವರಿಸಲಾಯಿತೆಂದು ಮುಖಂಡ ಸುರೇಶ್ ಕಲ್ಲಾಗರ್ ತಿಳಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅನುರಾಧಾ ಸಂಘಟನೆಯ ಪದಾಧಿಕಾರಿಗಳೊಂದಿಗೆ ಮಾತನಾಡಿದರು. ಹೈಕೋರ್ಟಿನಲ್ಲಿರುವ ಇಂದಿನ ವಿಚಾರಣೆ ನಾಳೆಗೆ ಮುಂದುವರಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಸರದಿ ಉಪವಾಸ ಸತ್ಯಾಗ್ರಹವನ್ನು ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ನಡೆಸಲಾಯಿತು. ಅದೇ ರೀತಿ ನಾಳೆ ಕೂಡ ಮುಂದುವರಿಸಲು ನಿರ್ಧರಿಸಲಾಯಿತು.
ಸತ್ಯಾಗ್ರಹದಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಂಘದ ಜಿಲ್ಲಾಧ್ಯಕ್ಷ ಶೇಖರ್ ಬಂಗೇರ, ಕಾರ್ಯದರ್ಶಿ ವಿಠಲ ಪೂಜಾರಿ, ಯು. ದಾಸ ಭಂಡಾರಿ, ರಾಮ ಕಾರ್ಕಡ, ಶ್ರೀನಿವಾಸ ಪೂಜಾರಿ, ಗಣೇಶ್ ನಾಯ್ಕಿ ಮೊದಲಾವರು ಉಪಸ್ಥಿತರಿದ್ದರು.







