ಕೆಎಸ್ಸಾರ್ಟಿಸಿ ನಿರ್ವಾಹಕ ಆತ್ಮಹತ್ಯೆ ಪ್ರಕರಣ: ತಪ್ಪಿತಸ್ಥರನ್ನು ತನಿಖೆಗೊಳಪಡಿಸಲು ಆಗ್ರಹ
ಮಂಗಳೂರು, ಸೆ. 28: ಪ್ರಯಾಣಿಕೆಯ ಚಿಲ್ಲರೆಯ ವಿಷಯದಲ್ಲಿ ಕಡಬ ಠಾಣೆಯಲ್ಲಿ ವಿಚಾರಣೆಗೊಳಗಾಗಿ ಕರ್ತವ್ಯಕ್ಕೆ ಹಾಜರಾದ ಕೆಎಸ್ಸಾರ್ಟಿಸಿ ಬಸ್‌ನ ನಿರ್ವಾಹಕ ದೇವದಾಸ್ ಚಲಿಸುತ್ತಿರುವ ಬಸ್ಸಿನಿಂದ ಕುಮಾರಧಾರ ನದಿಗೆ ಹಾರಿ ಜೀವ ಕಳಕೊಂಡ ವಿಷಯಕ್ಕೆ ಸಂಬಂಧಿಸಿ ಕಡಬ ಪೊಲೀಸ್ ಠಾಣಾ ಸಿಬ್ಬಂದಿಯನ್ನು ತನಿಖೆಗೊಳಪಡಿಸಬೇಕೆಂದು ಎಐಟಿಯುಸಿ ಆಗ್ರಹಿಸಿದೆ.
ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಅಮಾನವೀಯ ರೀತಿಯಲ್ಲಿ ದೇವದಾಸ್‌ರವರ ವಸ್ತ್ರ ತೆಗೆದು ತೀವ್ರ ತನಿಖೆ ಮಾಡಿದ ಪರಿಣಾಮ, ಸ್ವಾಭಿಮಾನಿಯಾಗಿದ್ದ ದೇವದಾಸ್‌ರವರು ಈ ರೀತಿ ಮಾಡಿರಬಹುದು. ಸಾರಿಗೆ ಸಂಸ್ಥೆಯಲ್ಲಿ ಅತ್ಯುತ್ತಮ ನಿರ್ವಾಹಕ ಪ್ರಶಸ್ತಿ ಪಡೆದ ದೇವದಾಸ್‌ರವರಿಗೆ ನ್ಯಾಯ ಸಿಗುವಂತಾಗಬೇಕು. ಆದುದರಿಂದ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಹಾಗೂ ಸಾವಿಗೆ ಕಾರಣರಾದವರನ್ನು ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಅಲ್ಲದೆ ಸರಕಾರವು ದೇವದಾಸ್‌ರ ಮಕ್ಕಳಿಗೆ ಸರಕಾರಿ ಉದ್ಯೋಗ ನೀಡಿ, 25ಲಕ್ಷ ರೂ. ಪರಿಹಾರ ನೀಡಬೇಕೆಂದು ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಕರುಣಾಕರ ಮಾರಿಪಳ್ಳ ಆಗ್ರಹಿಸಿದ್ದಾರೆ.





