ಪಾಕಿಸ್ತಾನಕ್ಕೆ ತೀವ್ರ ಮುಖಭಂಗ
ಇಸ್ಲಾಮಾಬಾದ್ ಸಾರ್ಕ್ ಶೃಂಗಸಭೆ ಮುಂದೂಡಿಕೆ

ಹೊಸದಿಲ್ಲಿ,ಸೆ.28: ಭಾರತದ ಜೊತೆಗೆ ಅಫಘಾನಿಸ್ತಾನ, ಬಾಂಗ್ಲಾದೇಶ ಮತ್ತು ಭೂತಾನ್ ದೇಶಗಳೂ ನವೆಂಬರ್ 9-10ರಂದು ಇಸ್ಲಾಮಾಬಾದ್‌ನಲ್ಲಿ ನಿಯೋಜಿತ 19ನೇ ಸಾರ್ಕ್ ಶೃಂಗಸಭೆಯನ್ನು ಬಹಿಷ್ಕರಿಸಿವೆ. ಇದರಿಂದಾಗಿ ಶೃಂಗಸಭೆಯನ್ನೇ ಮುಂದೂಡಲಾಗಿದೆ. ಇದು ಪಾಕಿಸ್ತಾನಕ್ಕೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಶೃಂಗಸಭೆಯು ಯಶಸ್ವಿಯಾಗಿ ನಡೆಯಲು ಪೂರಕವಲ್ಲದ ವಾತಾವರಣವನ್ನು ಸೃಷ್ಟಿಸಿರುವುದಕ್ಕಾಗಿ ಈ ಮೂರು ರಾಷ್ಟ್ರಗಳು ಪರೋಕ್ಷವಾಗಿ ಪಾಕಿಸ್ತಾನವನ್ನು ದೂರಿವೆ.
ಉರಿ ಭಯೋತ್ಪಾದಕ ದಾಳಿಯ ಬಳಿಕ ಪಾಕ್ ಜೊತೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಭಾರತವು ಗಡಿಯಾಚೆಯಿಂದ ಹೆಚ್ಚುತ್ತಿರುವ ದಾಳಿಗಳನ್ನು ಉಲ್ಲೇಖಿಸಿ ಶೃಂಗಸಭೆಯನ್ನು ತಾನು ಬಹಿಷ್ಕರಿಸಿರುವುದಾಗಿ ಕಳೆದ ರಾತ್ರಿ ಪ್ರಕಟಿಸಿತ್ತು.
ತನ್ನ ಆಂತರಿಕ ವ್ಯವಹಾರಗಳಲ್ಲಿ ಒಂದು ದೇಶದ ಹೆಚ್ಚುತ್ತಿರುವ ಹಸ್ತಕ್ಷೇಪವು ಸಾರ್ಕ್ ಶೃಂಗಸಭೆಯು ಯಶಸ್ವಿಯಾಗಿ ನಡೆಯಲು ಸಾಧ್ಯವಿಲ್ಲದ ವಾತಾವರಣವನ್ನು ಸೃಷ್ಟಿಸಿದೆ ಎಂದು ಬಾಂಗ್ಲಾದೇಶವು ಸ್ಪಷ್ಟವಾಗಿ ಹೇಳಿದ್ದರೆ, ತನ್ನ ರಾಷ್ಟ್ರದ ಮೇಲೆ ಹೇರಲಾಗಿರುವ ಭೀತಿವಾದದಿಂದಾಗಿ ಹಿಂಸಾಚಾರ ಮತ್ತು ಘರ್ಷಣೆಗಳು ಹೆಚ್ಚುತ್ತಿರುವುದರಿಂದ ಸಶಸ್ತ್ರ ಪಡೆಗಳ ಕಮಾಂಡರ್- ಇನ್-ಚೀಫ್ ಹೊಣೆಗಾರಿಕೆಯನ್ನು ಹೊಂದಿರುವ ತನ್ನ ಅಧ್ಯಕ್ಷ ಮೊಹಮ್ಮದ್ ಅಷ್ರಫ್ ಗನಿ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಫಘಾನಿಸ್ತಾನವು ಸಾರ್ಕ್ ಅಧ್ಯಕ್ಷ ರಾಷ್ಟ್ರವಾಗಿರುವ ನೇಪಾಳಕ್ಕೆ ತಿಳಿಸಿದೆ.
ಸಾರ್ಕ್ ಪ್ರಕ್ರಿಯೆ ಮತ್ತು ಪ್ರಾದೇಶಿಕ ಸಹಕಾರಕ್ಕೆ ತಾನು ಕಟಿಬದ್ಧ ಎಂದು ಭೂತಾನ್ ಹೇಳಿದೆಯಾದರೂ, ಪ್ರದೇಶದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಭಯೋತ್ಪಾದನೆಯು ಸಾರ್ಕ್ ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ವಾತಾವರಣವನ್ನು ಹಾಳು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಸಾರ್ಕ್ ಸನ್ನದಿನಂತೆ ಯಾವುದೇ ಒಂದು ದೇಶದ ಮುಖ್ಯಸ್ಥರು ಗೈರುಹಾಜರಾದರೂ ಶೃಂಗಸಭೆಯು ರದ್ದಾಗುತ್ತದೆ ಅಥವಾ ಮುಂದೂಡಲ್ಪಡುತ್ತದೆ.
1985ರಲ್ಲಿ ಸ್ಥಾಪನೆಯಾದ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ(ಸಾರ್ಕ್)ವು ಪ್ರಸಕ್ತ ಭಾರತ,ಅಫಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳನ್ನು ಸದಸ್ಯ ರಾಷ್ಟ್ರಗಳನ್ನಾಗಿ ಹೊಂದಿದೆ.







