116 ಮಕ್ಕಳ ಸಾವು: ಎನ್‌ಎಚ್‌ಆರ್‌ಸಿಯಿಂದ ಮಧ್ಯಪ್ರದೇಶ ಸರಕಾರಕ್ಕೆ ನೋಟಿಸ್

ಹೊಸದಿಲ್ಲಿ,ಸೆ.28: ಶೇವೋಪುರ ಜಿಲ್ಲೆಯಲ್ಲಿ ಕಳೆದ ಐದು ತಿಂಗಳುಗಳಲ್ಲಿ ಅಪೌಷ್ಟಿಕತೆ ಸಂಬಂಧಿತ ಕಾಯಿಲೆಗಳಿಂದ 116 ಮಕ್ಕಳ ಸಾವಿನ ವರದಿಗಳನ್ನು ಸ್ವಯಂಪ್ರೇರಿತವಾಗಿ ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮಧ್ಯಪ್ರದೇಶ ಸರಕಾರಕ್ಕೆ ನೋಟಿಸ್ ಹೊರಡಿಸಿದೆ. ನಾಲ್ಕು ವಾರಗಳಲ್ಲಿ ನೋಟಿಸಿಗೆ ಉತ್ತರಿಸುವಂತೆ ಅದು ಸೂಚಿಸಿದೆ.
ಜಿಲ್ಲೆಯಲ್ಲಿನ ಮೂರು ಪೌಷ್ಟಿಕತೆ ಪುನರ್ವಸತಿ ಕೇಂದ್ರಗಳು ದಟ್ಟಣೆಯ ಸಮಸ್ಯೆ ಎದುರಿಸುತ್ತಿದ್ದು, ಸೌಲಭ್ಯಗಳು ಮತ್ತು ವೈದ್ಯರ ಕೊರತೆಯಿದೆ ಎನ್ನುವುದನ್ನು ಮುಖ್ಯ ವೈದ್ಯಾಧಿಕಾರಿಗಳು ಒಪ್ಪಿಕೊಂಡಿದ್ದಾರೆಂದು ಮಾಧ್ಯಮ ವರದಿಗಳು ಬೆಟ್ಟು ಮಾಡಿವೆ. ಅಪೌಷ್ಟಿಕತೆ ಮತ್ತು ಸರಕಾರದಿಂದ ಆರೋಗ್ಯ ರಕ್ಷಣೆಯ ಕೊರತೆಯಿಂದಾಗಿ ಮಕ್ಕಳ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎನ್ನುವುದನ್ನು ಈ ವರದಿಗಳು ಸೂಚಿಸುತ್ತಿವೆ ಎಂದು ಆಯೋಗವು ಕಳವಳ ವ್ಯಕ್ತಪಡಿಸಿದೆ.
ಎಳೆಯ ಮಕ್ಕಳು ಸೂಕ್ತ ಪೌಷ್ಟಿಕ ಮತ್ತು ಸಮತೋಲಿತ ಆಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ. ಆಹಾರದ ಹಕ್ಕು ಮತ್ತು ಆರೋಗ್ಯದ ಹಕ್ಕು ಇತರ ಮಾನವ ಹಕ್ಕುಗಳನ್ನು ಚಲಾಯಿಸಲು ಅತ್ಯಗತ್ಯವಾಗಿವೆ ಎಂದು ಅದು ಹೇಳಿದೆ.





