ಸೌದಿಯಲ್ಲಿ ಸಿಲುಕಿರುವ ಭಾರತೀಯ ನೌಕರರನ್ನು ಹಿಂದೆ ತರಲು ಸರ್ವ ಪ್ರಯತ್ನ: ಸಿಂಗ್

ತಿರುವನಂತಪುರ, ಸೆ.28: ಸೌದಿ ಅರೇಬಿಯದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕೆಲಸ ಕೆಲಸ ಕಳೆದುಕೊಂಡು ಅತಂತ್ರರಾಗಿರುವ ಭಾರತೀಯರಿಗೆ ನಿರ್ಗಮನ ವೀಸಾ ದೊರಕಿಸಲು ಕೇಂದ್ರ ಸರಕಾರವು ಎಲ್ಲ ಪ್ರಯತ್ನ ಮಾಡಲಿದೆಯೆಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ. ಸಿಂಗ್ ಮಂಗಳವಾರ ಹೇಳಿದ್ದಾರೆ.
ಆದಾಗ್ಯೂ, ಇದುವರೆಗೆ ಎಷ್ಟು ಮಂದಿ ಭಾರತೀಯರು ಊರುಗಳಿಗೆ ಮರಳಿದ್ದಾರೆಂಬ ಕುರಿತು ನಿಖರ ಸಂಖ್ಯೆ ತನ್ನಲಿಲ್ಲವೆಂದು ಅವರು ತಿಳಿಸಿದ್ದಾರೆ.
ಸೌದಿ ಅರೇಬಿಯದಲ್ಲಿ 30-40 ಲಕ್ಷ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿನ ಹಲವು ಕಂಪೆನಿಗಳಲ್ಲಿ ಸಮಸ್ಯೆ ಉದ್ಬವಿಸಿದೆ. ಆರ್ಥಿಕ ಬಿಕ್ಕಟ್ಟಿನಿಂದ ನಿರ್ಮಾಣ ವಲಯ ಭಾರೀ ಹಿನ್ನಡೆ ಅನುಭವಿಸಿದೆ. ಅಪಾರ ಸಂಖ್ಯೆಯ ಭಾರತೀಯರು ಕೆಲಸ ಮಾಡುತ್ತಿರುವ ಬಿನ್‌ಲಾಡಿನ್ ಗ್ರೂಪ್, ಸೌದಿ ಒಜರ್ ಹಾಗೂ ಸೌದ್ ಗ್ರೂಪ್‌ಗಳಂತಹ ಬೃಹತ್ ಕಂಪೆನಿಗಳೂ ಸಮಸ್ಯೆ ಎದುರಿಸುತ್ತಿವೆ. ಅದರಿಂದಾಗಿ ಕೆಲವು ಕಂಪೆನಿಗಳು ನೌಕರರಿಗೆ ಸಂಬಳವನ್ನೇ ಕೊಟ್ಟಿಲ್ಲವೆಂದು ಸಿಂಗ್ ಪತ್ರಕರ್ತರಿಗೆ ತಿಳಿಸಿದ್ದಾರೆ.
ಸೌದಿ ಒಜರ್ ಗುಂಪಿನಿಂದ ಮರಳಿ ಬರಲಿಚ್ಛಿಸುವವರು ಈಗಾಗಲೇ ಬರತೊಡಗಿದ್ದಾರೆ. ಸೌದಿ ಅರೇಬಿಯ ಸರಕಾರ ಅವರಿಗೆ ವಿಮಾನ ಪ್ರಯಾಣದ ಖರ್ಚನ್ನು ನೀಡುತ್ತಿದೆ. ಆದರೆ, ಸೌದ್ ಗ್ರೂಪ್‌ನಲ್ಲಿ ಪರಿಸ್ಥಿತಿ ಭಿನ್ನವಿದೆ.ನಿರ್ಗಮನ ವೀಸಾಕ್ಕಾಗಿ ಕಂಪೆನಿಯ ನಿರಾಕ್ಷೇಪ ಪತ್ರ ಪಡೆಯಬೇಕಾಗುತ್ತದೆ. ಆದರೆ, ಏನು ಮಾಡಲೂ ನಿರಾಕರಿಸುತ್ತಿದೆ. ಆ ಬಗ್ಗೆ ಯಾವ ಕ್ರಮ ಕೈಗೊಳ್ಳಬಹುದೆಂದು ನಿರ್ಧರಿಸಲು ಅಲ್ಲಿನ ಕಾರ್ಮಿಕ ಸಚಿವರು ಪ್ರಕರಣವನ್ನು ರಾಯಲ್ ಕೋರ್ಟ್‌ಗೆ ಒಯ್ದಿದ್ದಾರೆಂದು ಅವರು ಹೇಳಿದ್ದಾರೆ.
ನಿರ್ಗಮನ ವೀಸಾ ಪಡೆದೊಡನೆಯೇ ನೌಕರರು ಹಿಂದಿರುಗಲಾರಂಭಿಸುತ್ತಾರೆ. ಬಿನ್‌ಲಾಡಿನ್ ಗುಂಪಿನಲ್ಲಿ ಕೆಲಸ ಮಾಡುತ್ತಿರುವವರಿಗೂ ನಿರ್ಗಮನ ವೀಸಾ ಪಡೆಯಲು ಸ್ವಲ್ಪ ಸಮಸ್ಯೆಯಿದೆ. ಸರಕಾರವು ಸಮಸ್ಯೆಯನ್ನು ನಿವಾರಿಸಿ, ನೌಕರರನ್ನು ಹಿಂದಕ್ಕೆ ತರಲು ಎಲ್ಲ ಪ್ರಯತ್ನ ಮಾಡಲಿದೆಯೆಂದು ಸಿಂಗ್ ತಿಳಿಸಿದ್ದಾರೆ.







