ಕೇರಳ ವಿಧಾನಸಭೆಯಲ್ಲಿ ಮೂವರು ಯುಡಿಎಫ್ ಶಾಸಕರ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರ, ಸೆ.28: ಕೇರಳದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳದ ಕುರಿತು ಎಲ್‌ಡಿಎಫ್ ಸರಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ವಿಪಕ್ಷ ಯುಡಿಎಫ್ ಸದಸ್ಯರು ಸತತ ಎರಡನೆಯ ದಿನವಾದ ಇಂದು ಸಹ ವಿಧಾನಸಭೆಯನ್ನು ಮುಂದೂಡುವಂತೆ ಮಾಡಿದ್ದಾರೆ. ವಿಪಕ್ಷದ ಮೂವರು ಸದಸ್ಯರು ಶಾಸಕಾಂಗ ಸಂಕೀರ್ಣದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ.
ಕಾಂಗ್ರೆಸ್‌ನ ಶಫಿ ಪರಂಬಿಲ್ ಹಾಗೂ ಹಿಬಿ ಈಡನ್ ಮತ್ತು ಕೆಸಿ-ಜೆಯ ಅನೂಪ್ ಜಾಕೊಬ್ ವಿಧಾನಸೌಧದ ಪ್ರವೇಶ ದ್ವಾರದ ಬಳಿ ಉಪವಾಸ ಆರಂಭಿಸಿದ್ದಾರೆ. ಅವರಿಗೆ ಬೆಂಬಲ ಸೂಚಿಸಿ, ಐಯುಎಂಎಲ್‌ನ ಕೆ.ಎಂ. ಶಾಜಿ ಹಾಗೂ ಎನ್. ಶಂಸುದ್ದೀನ್ ಸಹ ಸದನದ ಮೆಟ್ಟಲುಗಳ ಮೇಲೆ ಧರಣಿ ಆರಂಭಿಸಿದ್ದಾರೆ.
ಶುಲ್ಕ ಮತ್ತು ಪ್ರವೇಶ ನೀತಿಯ ಬಗ್ಗೆ ರಾಜ್ಯದ ಸಿಪಿಎಂ ನೇತೃತ್ವದ ಸರಕಾರ ಹಾಗೂ ಅನುದಾನ ರಹಿತ ಕಾಲೇಜುಗಳ ನಡುವೆ ಮಾಡಿಕೊಂಡಿರುವ ಒಪ್ಪಂದದ ವಿರುದ್ಧ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿ, ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹಾಗೂ ಇತರ ಯುಡಿಎಫ್ ಶಾಸಕರು ಕೈಜೋಡಿಸಿದ್ದಾರೆ.





