ಸೆಂಟ್ರಲ್ ಮಾರ್ಕೆಟ್‌ನಿಂದ ವ್ಯಾಪಾರಿಗಳ ಎತ್ತಂಗಡಿ

ಮಂಗಳೂರು, ಸೆ. 28: ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ಇಲಾಖೆಯ ಅಧಿಕಾರಿಗಳು ಇಂದು ನಗರದ ಮಾರ್ಕೆಟ್ ರಸ್ತೆಯಲ್ಲಿ ಫುತ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿದರು.
ಕಂದಾಯ ಇಲಾಖೆಯ ಅಧಿಕಾರಿ ಪ್ರವೀಣ್ ಕರ್ಕೇರ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಹಿತ ಪೊಲೀಸ್ ಭದ್ರತೆಯಲ್ಲಿ ಬೆಳಗ್ಗೆ ಸುಮಾರು 10 ಗಂಟೆಗೆ ಮಾರುಕಟ್ಟೆ ಕಟ್ಟಡದ ಆಸುಪಾಸಿನ ರಸ್ತೆ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಿದರು. ಮಾರುಕಟ್ಟೆ ಕಟ್ಟಡ ಒಳಗೆ ಕೆಲವು ವಾಪಾರಿಗಳು ಗ್ರಾಹಕರು ನಡೆಯುವ ದಾರಿಯಲ್ಲೇ ಸಾಮಾನುಗಳನ್ನಿಟ್ಟು ಮಾರಾಟ ಮಾಡುತ್ತಿದ್ದ ಬಗ್ಗೆ ಗಮನಿಸಿದ ಅಧಿಕಾರಿಗಳು ಸಾಮಾನುಗಳನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೆ, ಮಾರುಕಟ್ಟೆ ಕಟ್ಟಡ ಹೊರಗಿನ ರಸ್ತೆಯಲ್ಲಿ ತರಕಾರಿ, ಹಣ್ಣು ಹಂಪಲು ಮತ್ತಿತರ ಸಾಮಾನುಗಳನ್ನಿಟ್ಟು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಂದ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೆಲವು ವ್ಯಾಪಾರಿಗಳು ಪ್ರತಿರೋಧ ಒಡ್ಡಿದರೆ, ಮತ್ತೆ ಕೆಲವು ವ್ಯಾಪಾರಿಗಳು ಅಧಿಕಾರಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ತಮ್ಮ ಸಾಮಾನುಗಳನ್ನು ಕಟ್ಟಿ ಹೊತ್ತೊಯ್ಯುತ್ತಿದ್ದ ದೃಶ್ಯಗಳು ಕಂಡುಬಂದವು.
ಮಾರುಕಟ್ಟೆ ರಸ್ತೆಯಲ್ಲಿ ಹಣ್ಣು-ಹಂಪಲು, ತರಕಾರಿಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ತೊಂದರೆಯುಂಟಾಗುತ್ತಿತ್ತು. ಈ ಬಗ್ಗೆ ಹಿಂದಿನಿಂದಲೂ ದೂರುಗಳು ಕೇಳಿ ಬಂದಿದ್ದವು. ಇಂದು ಅಧಿಕಾರಿಗಳು ದೀಢೀರ್ ಆಗಿ ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳನ್ನು ತೆರವುಗೊಳಿಸಿದರು.







