ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸಿ: ಬಿ.ತಿಪ್ಪೇರುದ್ರಪ್ಪ
ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಚಿಕ್ಕಮಗಳೂರು, ಸೆ.28: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣವಿದ್ದು, ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಮೂಲಕ ಪ್ರವಾಸಿಗರನ್ನು ಉತ್ತೇಜಿಸಬೇಕೆಂದು ಪತ್ರಕರ್ತ ಹಾಗೂ ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ತಿಳಿಸಿದರು. ಅವರು ನಗರದ ಎಸ್‌ಟಿಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಎಸ್‌ಟಿಜೆ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಜಾಗತಿಕ ಪ್ರವಾಸೋದ್ಯಮ ಸೌಲಭ್ಯಗಳ ಲಭ್ಯತೆಗೆ ಉತ್ತೇಜನ ಎಂಬ ಸಂದೇಶದೊಂದಿಗೆ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜಗತ್ತು ಹಳ್ಳಿಯಾಗುವ ಈ ಸಂದಭರ್ದಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಜನಜೀವನ, ಸಂಸ್ಕೃತಿ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಕಣ್ತುಂಬಿಸಿಕೊಳ್ಳುವುದರ ಮೂಲಕ ಅವುಗಳ ವಿಶೇಷತೆ ಹಾಗೂ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು.
ಕೋಶ ಓದಬೇಕು, ದೇಶ ಸುತ್ತಬೇಕು ಎಂಬ ನಾಣ್ನುಡಿಯಂತೆ ಜಾಗತೀಕರಣದ ಈ ದಿನಗಳಲ್ಲಿ ತಮ್ಮ ಕಾರ್ಯಒತ್ತಡವನ್ನು ನಿವಾರಿಸಲು ಪ್ರವಾಸ ಕೈಗೊಳ್ಳುವುದರೊಂದಿಗೆ ಅಲ್ಲಿಯ ರಮಣೀಯ ಸ್ಥಳಗಳನ್ನು ನೋಡಿ ಮನಸ್ಸಿನ ಆನಂದವನ್ನು ಉಂಟುಮಾಡಿಕೊಳ್ಳುವ ಮೂಲಕ ಒತ್ತಡದಿಂದ ಹೊರಬರಬೇಕು. ಜಿಲ್ಲೆಯು ಪ್ರಕೃತಿ ಮಾತೆಯ ತವರೂರಾಗಿದ್ದು, ಇಲಿ ನೈಸರ್ಗಿಕ, ಧಾರ್ಮಿಕ, ಚಾರಿತ್ರಿಕ ಹಾಗೂ ರುದ್ರರಮಣೀಯ ಜಲಪಾತಗಳಿದ್ದು, ಇವು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿವೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಟಿ.ವಿ.ಎಲ್.ಎನ್. ರಾಜು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಮುಂದಿನ ದಿನಗಳಲ್ಲಿ ಇವುಗಳ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರವಾಸಿಗರು ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಂಡು ಮಾಲಿನ್ಯ ರಹಿತ ಹಾಗೂ ಜನಸ್ನೇಹಿ ವಾತಾವರಣವನ್ನು ಉಂಟು ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ನುಡಿದರು.
ಎಸ್‌ಟಿಜೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹಳದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪೌಳಸ್ವಾಮಿ, ವಾರ್ತಾಧಿಕಾರಿ ಬಿ. ಮಂಜುನಾಥ್, ಉಪನ್ಯಾಸಕರಾದ ಲತಾ, ಸಂತೋಷ್, ಲೋಹಿತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕವನಾ ಪ್ರಾರ್ಥಿಸಿದರು, ಪ್ರವಾಸೋದ್ಯಮ ಇಲಾಖೆಯ ಜಿ. ನಾಗರಾಜ್ ಸ್ವಾಗತಿಸಿದರು, ನಿಶ್ಚಯ್ ನಿರೂಪಿಸಿ, ನರ್ತನ್‌ಕುಮಾರ್ ವಂದಿಸಿದರು.







