ಸಾಂಸ್ಕೃತಿಕ ವೌಲ್ಯ, ಭಾವನೆಗಳ ಅಭಿವ್ಯಕ್ತಿಗೆ ಭಾಷೆ ಉತ್ತಮ ಮಾಧ್ಯಮ: ಅಝೀಝುಲ್ಲಾ ಬೇಗ್
ಉರ್ದು ವಾಚನಾಲಯ, ಉರ್ದು ಸಾಂಸ್ಕೃತಿಕ ಸಂಘದ ಉದ್ಘಾಟನೆ

ಚಿಕ್ಕಮಗಳೂರು, ಸೆ.28: ಸಾಂಸ್ಕೃತಿಕ ವೌಲ್ಯಗಳು ಮತ್ತು ಭಾವನೆಗಳ ಅಭಿವ್ಯಕ್ತಿಗೆ ಭಾಷೆ ಉತ್ತಮ ಮಾಧ್ಯಮ. ದೀರ್ಘ ಚರಿತ್ರೆಯುಳ್ಳ ಉರ್ದುಭಾಷೆ ಅತ್ಯಂತ ಸುಂದರ, ಪ್ರಾಚೀನ ಹಾಗೂ ಸಶಕ್ತಭಾಷೆ ಎಂದು ಕರ್ನಾಟಕ ಉರ್ದು ಅಕಾಡಮಿ ಅಧ್ಯಕ್ಷ ವಿಶ್ರಾಂತ ಐಎಎಸ್ ಅಧಿಕಾರಿ ಅಝೀಝುಲ್ಲಾಬೇಗ್ ಹೇಳಿದರು.
ನಗರದ ಸುವರ್ಣಮಾಧ್ಯಮ ಭವನದ ಮೊದಲ ಅಂತಸ್ತಿನಲ್ಲಿ ಅಕ್ಮಲ್‌ಕಿತಾಬ್ ಘರ್ ಉರ್ದು ವಾಚನಾಲಯ ಮತ್ತು ಕಾರ್ವಾನೆ-ಎ-ಉರ್ದುಅದಬ್ ಉರ್ದು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿದ ಅವರು, ಸಾಯಂಕಾಲ ಕುವೆಂಪು ಕಲಾಮಂದಿರದಲ್ಲಿ ನಾಮಫಲಕಗಳನ್ನು ಅನಾವರಣಗೊಳಿಸಿ ಮಾತನಾಡಿದರು. ಪರಸ್ಪರ ಸಂಪರ್ಕ ಮತ್ತು ಸಂಸರ್ಗದಿಂದ ಭಾಷೆಗಳು ಶ್ರೀಮಂತಗೊಳ್ಳುತ್ತವೆ. ಭಾಷೆ ಮತ್ತು ಸಾಹಿತ್ಯಕ್ಕೆ ಜಾತಿ, ಧರ್ಮ, ಪ್ರಾಂತ್ಯ, ದೇಶಗಳ ಎಲ್ಲೆ ಇಲ್ಲ. ಸಂಸ್ಕೃತಿಗಳ ನಡುವೆ ಸುಮಧುರ ಸಂಬಂಧಗಳ ಸೇತುವೆ ನಿರ್ಮಿಸಲು ಭಾಷೆ ಸಹಕಾರಿ. ಚಿಕ್ಕಮಗಳೂರಿನಲ್ಲಿ ಉರ್ದು ಬಲ್ಲವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಅವರು ಸಂಘಟಿತರಾಗಿ ಉರ್ದು ಭಾಷೆಯ ಸಿರಿವಂತಿಕೆಯನ್ನು ಅರಿತು ಇತರರಿಗೂ ಉಣಬಡಿಸುವ ಕೆಲಸ ಮಾಡಬೇಕೆಂದರು.
ಖ್ಯಾತಕವಿ, ಸಾಹಿತಿ, ಅನುವಾದಕ ಸೈಯದ್‌ಅಹ್ಮದ್‌ಇಸ್ಸಾರ್ ಮಾತನಾಡಿ, ಭಾರತದ ಹಲವೆಡೆ ಜನರು ವ್ಯಾಪಕವಾಗಿ ಉರ್ದು ಭಾಷೆ ಮಾತನಾಡುತ್ತಾರೆ. ಕೆಲವೆಡೆ ನಾಡ ಭಾಷೆಯಾಗಿ ವ್ಯವಹಾರಿಕ ಭಾಷೆಯಾಗಿಯೂ ಬಳಕೆಯಲ್ಲಿದೆ. ಬದುಕಿನ ಸೂಕ್ಷ್ಮಗಳನ್ನು ಸಮರ್ಥವಾಗಿ ಹಿಡಿದು ಅನಾವರಣಗೊಳಿಸುವ ಅಭಿವ್ಯಕ್ತಿ ಮಾಧ್ಯಮವಾಗಿ ಉರ್ದು ಯಶಸ್ವಿಯಾಗಿದ್ದು, ಸಮಸ್ತ ಭಾರತದ ಭಾಷಾ ಕುಟುಂಬದ ಒಂದು ಅವಿಭಾಜ್ಯ ಅಂಗವೆಂಬುದನ್ನು ಮರೆಯಲಾಗದು ಎಂದರು. ಉರ್ದು ಡಿಟಿಪಿ ಸೆಂಟರ್‌ನ್ನು ಉರ್ದು ಅಕಾಡಮಿ ಸದಸ್ಯ ಸರ್ಫುದ್ದೀನ್ ಸೈಯದ್ ಉದ್ಘಾಟಿಸಿದರು. ಉರ್ದು ಕಲಿಯಿರಿ-ಕಲಿಸಿರಿ ಯೋಜನೆಗಳಿಗೆ ಚಾಲನೆ ನೀಡಿದ ಇಂಡಿಯಾ ಬಿಲ್ಡರ್ಸ್ ಮಾಲಕ ಝಿಯಾವುಲ್ಲಾ ಶರೀಫ್ ಶುಭಹಾರೈಸಿ ಮಾತನಾಡಿ ಉರ್ದು ಕಿತಾಬ್ ಘರ್ ಯೋಜನೆಗೆ ಮಾಸಿಕ 2,000ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದರು. ಬಿಹಾರ ಮೂಲದ ಸಾಫ್ಟ್‌ವೇರ್‌ಇಂಜಿನಿಯರ್ ರಘುಪತಿ ರಝಾ ಮತ್ತು ಸಂಗಡಿಗರಿಂದ ಶಾಮ್-ಎ-ಗಝಲ್ ಗಾಯನ ಗಮನಸೆಳೆಯಿತು.
ಕಾರ್ವಾನೆ-ಎ-ಉರ್ದು ಅದಬ್ ಹಿರಿಯ ಸದಸ್ಯ ಅಶ್ಫಾಕ್ ಅಹ್ಮದ್ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಕೆ.ಮುಹಮ್ಮದ್‌ಜಾಫರ್ ನಿರೂಪಿಸಿದರು. ಉಪಾಧ್ಯಕ್ಷರಾದ ಶಹನವಾಝ್ ಬಾನು ಶಹೀನ್ ವರದಿ ಮಂಡಿಸಿದ್ದು, ಅಧ್ಯಕ್ಷ ಶಯೀಬ್‌ಅಲಿ, ಪೋಷಕರುಗಳಾದ ಎಂ.ಬಿ.ಘನಿ ಮತ್ತು ಸೈಯದ್‌ಮುನೀರ್‌ಅಹ್ಮದ್, ಕಾರ್ಯದರ್ಶಿ ಮುಹಮ್ಮದ್ ಜಾಫರ್, ಸಹ ಕಾರ್ಯದರ್ಶಿ ರಹ್ಮತುನ್ನೀಸಾ ಮತ್ತು ದಾವೂದ್‌ಅಲಿ, ಖಜಾಂಚಿ ಸುಹಾನ್ ಸುಲ್ತಾನ, ಸದಸ್ಯರಾದ ಖಾಲಿದುರ್ರಹ್ಮಾನ್, ಸಯೀದಾ ಅಸ್ಮತುನ್ನೀಸ, ಶಬೀರ್‌ಅಹ್ಮದ್, ಮುಹಮ್ಮದ್ ಸಾ ದಿಕ್, ಝಹೀರ್ ಇರ್ಫಾನ್ ಮತ್ತಿತರರಿದ್ದರು. ಎಜಾಝ್ ಅಹ್ಮದ್ ವಂದಿಸಿದರು.







