ಜಾತಿ, ಧರ್ಮ ವ್ಯಕ್ತಿತ್ವ ಅಳೆಯುವ ಮಾನದಂಡವಾಗಬಾರದು: ನಟರಾಜ್
ದಲಿತರ ಬದುಕು ಮತ್ತು ಸಾಹಿತ್ಯ ವಿಚಾರಗೋಷ್ಠಿ

ತೀರ್ಥಹಳ್ಳಿ, ಸೆ. 28: ಭೂಮಿಯಲ್ಲಿ ನೂರಾರು ಜಾತಿ, ಧರ್ಮಗಳು ಉದಯವಾಗಿವೆ. ಆದರೆ, ಹುಟ್ಟಿದ ಜಾತಿ, ಧರ್ಮ ವ್ಯಕ್ತಿಯ ವ್ಯಕ್ತಿತ್ವ ಮತ್ತು ಸ್ವಾಭಿಮಾನವನ್ನು ನಿರ್ಧರಿಸುವ ಅಂಶವಾಗಬಾರದು. ಹುಟ್ಟಿನಿಂದ ಯಾರೂ ಶ್ರೇಷ್ಠ ಮತ್ತು ಕನಿಷ್ಠವಾಗಲು ಸಾಧ್ಯವಿಲ್ಲ ಎಂದು ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ಉಪನ್ಯಾಸಕ ನಟರಾಜ್ ಅರಳಸುರಳಿ ಅಭಿಪ್ರಾಯಿಸಿದ್ದಾರೆ.
ತಾಲೂಕಿನ ಮೇಗರವಳ್ಳಿಯ ಸರಕಾರಿ ಪಪೂ ಕಾಲೇಜಿನ ಸಭಾಂಗಣದಲ್ಲಿ ತೀರ್ಥಹಳ್ಳಿ ಕಸಾಪ ಆಯೋಜಿಸಿದ್ದ ದಲಿತರ ಬದುಕು ಮತ್ತು ಸಾಹಿತ್ಯ ವಿಚಾರಗೋಷ್ಠಿಯಲ್ಲಿ ಮುಖ್ಯ ಭಾಷಣ ಮಾಡಿದರು.
ಶೋಷಣೆಯು ಪ್ರಪಂಚದಾದ್ಯಂತ ಪ್ರಯೋಗಿಸಲ್ಪಟ್ಟ ಒಂದು ಅಸವಾಗಿದೆ. ಭಾರತದಂತಹ ದೇಶದಲ್ಲಿ ದಲಿತರಾದರೆ ವಿದೇಶಗಳಲ್ಲಿ ನೀಗ್ರೋಗಳು ಅನೇಕ ವರ್ಷದಿಂದ ಜೀತಕ್ಕೆ ಒಳಪಟ್ಟು ಬೇರೆ ಬೇರೆ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿರುವುದು ನಿಜಕ್ಕೂ ಅವಮಾನವೀಯ ಎಂದರು.
ಅನೇಕ ಶತಮಾನಗಳಿಂದ ಪ್ರಪಂಚದಾದ್ಯಂತ ಶೋಷಿತ ಸಮುದಾಯಗಳನ್ನು ಜೀತ ಮತ್ತು ಇನ್ನಿತರ ಕೆಳ ಹಂತದ ಕೆಲಸಗಳಲ್ಲಿ ಬಳಸಿಕೊಂಡರೇ ಹೊರತು ಅವರನ್ನು ಸಮಾಜಮುಖಿಯಾಗಿ ಎಲ್ಲರಂತೆ ಸಮಾನರಾಗಿ ಬದುಕಲು ಜೊತೆಗೆ ಪೂರಕ ಶಿಕ್ಷಣ ನೀಡುವ ಸ್ವತಂತ್ರವನ್ನು ನೀಡದಿರುವುದು ದುರಂತವಲ್ಲವೇ ಎಂದು ಪ್ರಶ್ನಿಸಿದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಕುಮಾರಸ್ವಾಮಿ, ಶಾಲಾ ಸಮಿತಿಯ ಅಧ್ಯಕ್ಷ ವೆಂಕಟೇಶ್ ಹೆಗ್ಡೆ, ತೀರ್ಥಹಳ್ಳಿ ಕಸಾಪ ಅಧ್ಯಕ್ಷ ಆಡಿನಸರ ಸತೀಶ್, ನಿವೃತ್ತ ಶಿಕ್ಷಕ ಕಿಟ್ಟಪ್ಪ ಮಾಸ್ಟರ್, ಪಡುವಳ್ಳಿ ಹರ್ಷೇಂದ್ರಕುಮಾರ್ ಮುಂತಾದವರಿದ್ದರು.







