ನಾಡದೋಣಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲು ಆಗ್ರಹ
ಕಾರವಾರ, ಸೆ.28: ಶರಾವತಿ ನದಿಯಲ್ಲಿ ನಾಡ ದೋಣಿ ಬಳಿಸಿ ಹೊಸಪಟ್ಟಣದ, ಕಳಸಿನಮೋಟೆ ಭಾಗದಲ್ಲಿ ಮರಳು ತೆಗೆಯಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಹೊನ್ನಾವರದ ಕಳಸಿನಮೋಟೆಯ ಕಾರ್ಮಿಕ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಶರಾವತಿ ನದಿಯ ಹೊಸಪಟ್ಟಣ ಗ್ರಾಮದ ಕಳಸಿನಮೋಟೆ ನೂರಾರು ಕುಟುಂಬಗಳು ಮರಳು ತೆಗೆಯುವ ಉದ್ಯೋಗವನ್ನು ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಮನವಿಯಲ್ಲ್ಲಿ ಪ್ರಸ್ತಾಪಿಸಿದ್ದಾರೆ.
ತಮ್ಮ ಊರಿನ ಸುತ್ತಮುತ್ತಲೂ ನೀರು ಆವರಿಸಿದ್ದು ಸಣ್ಣ ದ್ವೀಪವಾಗಿದೆ. ಕೇವಲ ಮಳೆಗಾಲದ ಬೆಳೆಯೊಂದನ್ನು ಅವಲಂಬಿಸಿ ಬದುಕುತ್ತಿರುವ ತಮಗೆಲ್ಲ ಈ ವರ್ಷ ಬೆಳೆಯು ಸಮರ್ಪಕವಾಗಿ ಬಂದಿಲ್ಲ. ಉಪಕಸುಬಾದ ಮರಳುಗಾರಿಕೆಯಲ್ಲಿ ಅಲ್ಪ ಸ್ವಲ್ಪ ಕೆಲಸವನ್ನು ಅವಲಂಬಿಸಿಕೊಂಡು ಜೀವನ ಸಾಗಿಸಬೇಕಾಗಿದೆ. ಈ ಉದ್ಯೋಗ ಬಿಟ್ಟರೆ ಬೇರೆ ಯಾವುದೇ ಉದ್ಯೋಗಕ್ಕೆ ಅವಕಾಶವಿಲ್ಲ. ಈ ಮೊದಲಿದ್ದ ಎರಡು ಹಂಚಿನ ಕಾರ್ಖಾನೆ ಹಾಗೂ ಒಂದು ಐಸ್ ಕಾರ್ಖಾನೆಯನ್ನು ಸ್ಥಗಿತಗೊಂಡಿರುವುದರಿಂದ ಯಾವುದೇ ಉದ್ಯೋಗವಿಲ್ಲದಂತಾಗಿದೆ ಎಂದಿದ್ದಾರೆ. ಹಂಚು ಕಾರ್ಖಾನೆ ಸ್ಥಗಿತವಾಗಿದ್ದರಿಂದ ಈ ಭಾಗದಲ್ಲಿ ಹೆಚ್ಚಿನ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. 4-5 ವರ್ಷದ ಹಿಂದೆ ಕೇವಲ ಸಾಂಪ್ರದಾಯಿಕ ನಾಡದೋಣಿಗಳ ಮೂಲಕ ಬಡವರ ಹೊಟ್ಟೆ ತುಂಬಿಸುತ್ತಿದ್ದ ಮರಳುಗಾರಿಕೆ, ಇಂದು ಹಣವಂತರ, ಮಧ್ಯವರ್ತಿಗಳ ಲಾಭದ ಉದ್ಯೋಗವಾಗಿದೆ. ಶೀಘ್ರವೇ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ನಾರಾಯಣಗೌಡ, ಮಂಜುನಾಥಗೌಡ, ರಾಜೇಶಗೌಡ, ಸುಬ್ರಾಯಗೌಡ, ರಾಮ್‌ಗೌಡ, ಸತೀಶಗೌಡ, ಹನುಮಂತಗೌಡ, ಲಕ್ಷ್ಮಣಗೌಡ ಮತ್ತಿತರರಿದ್ದರು.





