ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯ
ತೀರ್ಥಹಳ್ಳಿ ತಾಪಂ ಸಾಮಾನ್ಯಸಭೆ

ತೀರ್ಥಹಳ್ಳಿ, ಸೆ. 28: ತಾಲೂಕಿನಲ್ಲಿ ತೀವ್ರವಾದ ಬರದ ಛಾಯೆ ಆವರಿಸಿದ್ದು, ಮಳೆ ಕೈಕೊಟ್ಟ ಕಾರಣ ರೈತರು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಆತಂಕ ಪಡುತ್ತಿದ್ದಾರೆ. ತಾಲೂಕಿನಾದ್ಯಂತ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ತಾಪಂ ಸದಸ್ಯರು ಒಕ್ಕೊರಲಿನಿಂದ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ತಾಪಂ ಸದಸ್ಯ ಸಾಲೇಕೊಪ್ಪ ರಾಮಚಂದ್ರ, ಇಲ್ಲಿನ ಪ್ರಮುಖ ನದಿಯಾದ ತುಂಗೆ ಬತ್ತುವ ಸ್ಥಿತಿ ತಲುಪಿದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಕೃಷಿ ಬದುಕು ಸಂಕಷ್ಟದಲ್ಲಿದೆ. ಸರಕಾರ ಕಳೆದೊಂದು ವರ್ಷದಿಂದ ರೈತರ ಪರ ಗಮನ ಹರಿಸದೆ ಯಾವ ಯೋಜನೆಗಳೂ ರೂಪುಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ. ಲಾನುಭವಿಗಳನ್ನೂ ಸಹ ಅಗೌರವದಿಂದ ಕಾಣುವಂತಹ ಅಧಿಕಾರಿಗಳಿದ್ದಾರೆ. ಇಲಾಖೆಯಲ್ಲಿನ ಸಮಸ್ಯೆಗಳು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆೆ ಎಂದು ತಾಪಂ ಸದಸ್ಯೆ ಶ್ರುತಿ ವೆಂಕಟೇಶ್ ಹೇಳಿದರು.
ಅರಣ್ಯ ಹಕ್ಕು ಕಾಯ್ದೆ ವಿಚಾರದಲ್ಲಿ ರಾಜ್ಯ ಸರಕಾರ ಮತ್ತು ಅಧಿಕಾರಿಗಳು ಕಾರ್ಯ ನಿರ್ವಹಿಸುವಲ್ಲಿ ಸೋಮಾರಿತನ ಪ್ರದರ್ಶಿಸುತ್ತಿದ್ದಾರೆ. ಬಡವರ ಪರ ಇರಬೇಕಾದ ಸರಕಾರದ ಬಹಳಷ್ಟು ಯೋಜನೆಗಳು ಅಧಿಕಾರಿಗಳ ನಿರ್ಲಕ್ಷದಿಂದ ಯಶಸ್ವಿಯಾಗುತ್ತಿಲ್ಲ ಎಂದು ಸದಸ್ಯ ಪ್ರಶಾಂತ್ ಕುಕ್ಕೆ ಸಭೆಯ ಗಮನ ಸೆಳೆದರು.
ವಸತಿ ಹೀನರಿಗೆ ಹಾಗೂ ನಿವೇಶನ ರಹಿತರಿಗೆ ಅಕ್ರಮ-ಸಕ್ರಮ 94ಸಿ ಹಾಗೂ 94ಸಿಸಿ ವಿಚಾರದಲ್ಲಿ ಹೆಚ್ಚಿನ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಹಶೀಲ್ದಾರ್ ಲೋಕೇಶ್ವರಪ್ಪ ಉತ್ತರಿಸಿದಾಗ, ಆಕ್ರೋಶಗೊಂಡ ತಾಪಂ ಸದಸ್ಯ ಕವಿರಾಜ್, ಜನಸಾಮಾನ್ಯರ ಹಾಗೂ ಬಡವರ ದಾರಿ ತಪ್ಪಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡುತ್ತಿದೆ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ತಾಲೂಕಿನಲ್ಲಿ ಕಳೆದ 2 ವರ್ಷಗಳಿಂದ ನಡೆಯುತ್ತಿದೆ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಆಗದು. ನಿಮ್ಮಲ್ಲಿ ದಾಖಲೆ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.
ಈ ಸಭೆಯಲ್ಲಿ ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ವಿದ್ಯುತ್ ಇಲಾಖೆ, ಅರಣ್ಯ ಇಲಾಖೆ ವಿಚಾರಗಳ ಬಗ್ಗೆ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ನವಮಣಿ ರವಿಕುಮಾರ್ ವಹಿಸಿದ್ದರು.ವೇದಿಕೆಯಲ್ಲಿ ಉಪಾಧ್ಯಕ್ಷೆ ಯಶೋದ ಮಂಜುನಾಥ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಾ. ಮಂಜುನಾಥ್, ತಹಶೀಲ್ದಾರ್ ಲೋಕೇಶಪ್ಪ ಉಪಸ್ಥಿತತರಿದ್ದರು.







