ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿ: ಡಿವೈಎಸ್ಪಿ ಚಂದ್ರಪ್ಪ
ಎಸಿಬಿಯಿಂದ ಅಹವಾಲು ಸ್ವೀಕಾರ

ಸೊರಬ, ಸೆ. 28: ಸಾರ್ವಜನಿಕ ಸೇವೆಯಲ್ಲಿ ತಮಗೆ ಸಿಕ್ಕ ಅಧಿಕಾರವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಮುಂದಿನ ನಿವೃತ್ತಿ ನಂತರದ ಜೀವನವನ್ನು ಸುಖ ಹಾಗೂ ಆರೋಗ್ಯಕರವಾಗಿ ನಡೆಸಲು ಸಾಧ್ಯವಾಗುತ್ತದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಚಂದ್ರಪ್ಪ ಕಿವಿ ಮಾತು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಿಂದ ಏರ್ಪಡಿಸಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನೌಕರರು ತಮ್ಮ ಸೇವೆಯಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕಾರ್ಯನಿರ್ವಹಿಸಬೇಕಿದ್ದು, ತಪ್ಪಿದ್ದಲ್ಲಿ ಕಾನೂನು ಕ್ರಮದಲ್ಲಿ ಸಿಲುಕಿ ನಲುಗಬೇಕಾಗುತ್ತದೆ.ಭ್ರಷ್ಟಾಚಾರ ನಿಗ್ರಹ ದಳವು ಲಂಚದ ಪ್ರಕರಣಗಳಿಗೆ ಮಾತ್ರ ಕ್ರಮ ತೆಗೆದುಕೊಳ್ಳದೆ, ಅಧಿಕಾರಿಗಳು ಫಲಾನುಭವಿಗಳ ಹಾಗೂ ಸಾರ್ವಜನಿಕರ ಕೆಲಸವನ್ನು ನಿರ್ವಹಿಸಲು ನಿರ್ಲಕ್ಷಿಸಿದ್ದಲ್ಲಿ, ಸರಕಾರದ ಆಸ್ತಿಯನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲಿ, ಸರಕಾರಿ ಅನುದಾನವನ್ನು ಅಸಮರ್ಪಕವಾಗಿ ಬಳಸಿಕೊಂಡಿದ್ದರ ಬಗ್ಗೆ ದೂರು ಬಂದಿದ್ದಲ್ಲಿ ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುತ್ತದೆ. ಸರಕಾರ ನೌಕರರ ಕುಟುಂಬಕ್ಕೆ ಬೇಕಾಗುವಷ್ಟ್ಟು ವೇತನ ನೀಡುತ್ತದೆ. ಅದರಾಚೆಗೆ ಹಣ ಗಳಿಸುವ ಕೆಲಸಕ್ಕೆ ಕೈ ಹಾಕುವುದು ಸರಿಯಲ್ಲ. ಸಾರ್ವಜನಿಕರು ವಂಚನೆ ಹಾಗೂ ಭ್ರಷ್ಟಾಚಾರದ ಬಗ್ಗೆ ದೂರನ್ನು ನೀಡಿದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು. ಜನಪ್ರತಿನಿಧಿಗಳು, ಸರಕಾರಿ ಮತ್ತು ಅರೆ ಸರಕಾರಿ ನೌಕರರು, ಸರಕಾರದ ಅನುದಾನಕ್ಕೆ ಒಳಪಡುವ ಎನ್‌ಜಿಒ ಗಳು ಇದರ ವ್ಯಾಪ್ತಿಯಲ್ಲಿ ಬರುತ್ತಾರೆ. ಅಧಿಕಾರಿಗಳು ಎಚ್ಚರಿಕೆಯಿಂದ ಮಾನವೀಯವಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಹಾಗೂ ಇನ್ಯಾರದೇ ವ್ಯಕ್ತಿಗಳ ವಂಚನೆಗೆ ಬೇಸತ್ತ ವ್ಯಕ್ತಿಗಳು ನೇರವಾಗಿ ದೂರು ದಾಖಲಿಸಬಹುದಾಗಿದೆ. ಇದರಿಂದ ಸಮಾಜವನ್ನು ಭ್ರಷ್ಟಮುಕ್ತಗೊಳಿಸಬಹುದು ಎಂದರು.





