ಹೆಚ್ಚುವರಿ ಪರಿಹಾರ ನೀಡದೆ ಭೂಸ್ವಾಧೀನ ಪ್ರಕ್ರಿಯೆ ಇಲ್ಲ : ಶಾಸಕ ಸೈಲ್
ಸೀಬರ್ಡ್ ನಿರಾಶ್ರಿತರ ಭೂ ಪರಿಹಾರ ವಿಳಂಬ

ಕಾರವಾರ, ಸೆ.28: ಸೀಬರ್ಡ್ ನಿರಾಶ್ರಿತರಿಗೆ ಬಾಕಿ ಇರುವ ಹೆಚ್ಚುವರಿ ಭೂ ಪರಿಹಾರ ಸಂಪೂರ್ಣ ನೀಡದ ಹೊರತು, ಸೀಬರ್ಡ್‌ಗೆ ಮುಂದೆ ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಸತೀಶ್ ಕೆ. ಸೈಲ್ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸೀಬರ್ಡ್ ರಾಜ್ಯ ಮಟ್ಟದ ಸಮನ್ವಯ ಸಭೆಯಲ್ಲಿ ನಿರಾಶ್ರಿತರ ಸಮಸ್ಯೆಗಳನ್ನು ಸಭೆಯ ಮುಂದಿಡಲು ಅವಕಾಶ ನೀಡಬೇಕೆಂದು ಶಾಸಕರು ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿ ಅವರನ್ನು ಆಗ್ರಹಿಸಿದ್ದರು. ಅದರಂತೆ ಸಭೆ ಆರಂಭಕ್ಕೂ ಮೊದಲು ಅನಿಸಿಕೆಗಳನ್ನು ಹಂಚಿಕೊಂಡ ಶಾಸಕರು, ಸಭೆಯಲ್ಲಿ ಸೀಬರ್ಡ್ ನಿರಾಶ್ರಿತರಿಗೆ ಕೋರ್ಟ್ ಆದೇಶ ನೀಡಿದರೆ ಮಾತ್ರ ಪರಿಹಾರ ನೀಡಲಾ ಗುವುದೆಂದು ಕೇಂದ್ರ ರಕ್ಷಣಾ ಸಚಿವರು ನೀಡಿದ್ದ ಹೇಳಿ ಕೆಯ ಸಾಧಕ ಬಾಧಕಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಸೀಬರ್ಡ್ ನಿರಾಶ್ರಿತರ ವಿವಿಧ ಪ್ರಕರಣಗಳು ಸಿವಿಲ್ ನ್ಯಾಯಾಲಯ, ಜಿಲ್ಲಾ ಸಿವಿಲ್ ನ್ಯಾಯಾಲಯ, ಸೆಕ್ಷನ್ 28 ಅಡಿಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯ, ರಾಜ್ಯ ಉಚ್ಚ ನ್ಯಾಯಾಲಯಗಳಲ್ಲಿ ನಿರಾಶ್ರಿತರ ಪರವಾಗಿ ಆದೇಶವಾಗಿ ಕೆಲವು ವರ್ಷಗಳೇ ಕಳೆದಿವೆ ಎಂದಿದ್ದರು.
ಅಲ್ಲದೆ, ಇಲ್ಲಿ ಎಲ್ಲಾ ನ್ಯಾಯಾಲಯಗಳು ನಿರಾಶ್ರಿತರ ಪರವಾಗಿಯೇ ಆದೇಶ ನೀಡಿರುವುದರಿಂದ ಅವರು ಹೆಚ್ಚುವರಿ ಪರಿಹಾರಕ್ಕಾಗಿ ಅರ್ಹರಾಗಿದ್ದಾರೆ. ಹೀಗಿರುವಾಗ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಾದ ಆವಶ್ಯಕತೆ ಇರುವುದಿಲ್ಲ. ಅದರಂತೆ ಹೆಚ್ಚುರಿ ಪರಿಹಾರ ಕಲ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ರಕ್ಷಣಾ ಇಲಾಖೆ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ ಮಾತ್ರ ಅರ್ಜಿದಾರ ನಿರಾಶ್ರಿತರು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿವಾದಿಗಳಾಗಿ ಸಮರ್ಥಿಸಿಕೊಳ್ಳಬಹುದು. ಆದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಆದೇಶವಾದ ಪ್ರಕರಣಗಳಿಗೆ ಮಾತ್ರ ಹೆಚ್ಚುವರಿ ಪರಿಹಾರ ನೀಡಲಾಗುವುದೆಂದು ಎಂದು ಕೇಂದ್ರ ರಕ್ಷಣಾ ಇಲಾಖೆಯ ಹೇಳಿಕೆಗಳಲ್ಲಿ ಸ್ಪಷ್ಟತೆಗಳಿಲ್ಲ ಎಂದು ಆರೋಪಿಸಿರುವ ಸಚಿವರು, ಆದ್ದರಿಂದ ನಿರಾಶ್ರಿತರಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಆದೇಶವಾಗಿರುವ ಎಲ್ಲಾ ಪ್ರಕರಣಗಳಿಗೂ ಕೂಡಲೇ ಏಕಕಾಲದಲ್ಲಿ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದ್ದಾರೆ. ಜೊತೆಗೆ ಸೀಬರ್ಡ್ ನೌಕಾನೆಲೆಗೆ ಏಕ ಉದ್ದೇಶ ಮತ್ತು ಏಕ ಅಧಿಸೂಚನೆಯಂತೆ ಭೂಸ್ವಾಧೀನ ಗೊಂಡಿರುವುದರಿಂದ, ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಎಲ್ಲಾ ಪ್ರಕರಣಗಳಿಗೂ ಒಂದೇ ರೀತಿಯ ಪರಿಹಾರವನ್ನು ಏಕಕಾಲದಲ್ಲಿ ನೀಡಬೇಕು ಎಂದು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದರು.
ಇದರ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆದೇಶವಾಗಿ ಬೆಂಗಳೂರಿನ ರಕ್ಷಣಾ ಇಲಾಖೆಗೆ ರವಾನಿಸಲ್ಪಟ್ಟಿರುವ ಪ್ರಕರಣಗಳು ತಾಂತ್ರಿಕ ಕಾರಣಗಳಿಂದ ಹಿಂತಿರುಗಿ ಬಂದಿವೆ ಎಂದ ಅವರು, ಪರಿಹಾರಾರ್ಥವಾಗಿ ಬೆಂಗಳೂರಿನ ರಕ್ಷಣಾ ಇಲಾಖೆ ಸಿಬ್ಬಂದಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರದಿಯಂತೆ ಕಾರ್ಯನಿರ್ವಹಿಸಿ ಪ್ರಕರಣಗಳನ್ನು ಪರಿವೀಕ್ಷಿಸಬೇಕೆಂದು ಸೈಲ್ ಅಧಿಕಾರಿಗಳಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಕೋಲಾದ ಬೆರಡೆ ಗ್ರಾಮದ ಜನರಿಗೆ ರಸ್ತೆ ಮುಂತಾದ ಮೂಲಭೂತ ಸೌಕರ್ಯ ಒದಗಿಸಲು ವಿನಂತಿಸಲಾಗಿತ್ತು. ಬಳಿಕ ಅಧಿಕೃತವಾಗಿ ನಡೆದ ಸಮನ್ವಯ ಸಮಿತಿಯ ಅಧಿಕೃತ ಸಭೆಯಲ್ಲಿ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಚರ್ಚಿಸಿ ತಾನು ಸೂಚಿಸಿದ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಯೋಗ್ಯ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಸಕ ಸೈಲ್ ತಿಳಿಸಿದ್ದಾರೆ.







