ಅಲ್ಪಸಂಖ್ಯಾತರು, ದಲಿತರು, ರೈತರ ಕಡೆಗಣನೆ: ಪ್ರತಿಭಟನೆಯ ಎಚ್ಚರಿಕೆ
ಸಾಹಿತ್ಯ ಸಮ್ಮೇಳನ ಕೇಸರೀಕರಣದ ಹುನ್ನಾರ ಆರೋಪ
.jpg)
ಸಾಗರ , ಸೆ.28: ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಅಲ್ಪ ಸಂಖ್ಯಾತರು, ದಲಿತರು ಹಾಗೂ ರೈತ ಸಂಘಟನೆಗಳನ್ನು ಕಡೆಗಣಿಸಿ ಸಾಹಿತ್ಯ ಸಮ್ಮೇಳನವನ್ನು ಸಂಪೂರ್ಣ ಕೇಸರೀಕರಣ ಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಹಾಗೂ ರೈತಪರ ಸಂಘಟನೆಗಳು ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿ ಬಳಿಕ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಸೆ. 30ರಿಂದ ಅ. 1ರವರೆಗೆ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ರೈತ ಚಳವಳಿಗಾರರು, ದಲಿತ ಚಳವಳಿಗಾರರು, ಸಾಹಿತಿಗಳು, ಜನಪರ ಹೋರಾಟಗಾರರನ್ನು ಮೂಲೆಗುಂಪು ಮಾಡಿ, ಮೇಲ್ವರ್ಗದವರಿಗೆ ಮಣೆ ಹಾಕುವ ಮೂಲಕ ಸಾಹಿತ್ಯ ಸಮ್ಮೇಳನವನ್ನು ಕೇಸರೀಕರಣ ಮಾಡಲು ಹೊಟಿದ್ದಾರೆ ಎಂದು ಆರೋಪಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಕಾಟಾಚಾರಕ್ಕೆ ಎಂಬಂತೆ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿ ಗಾಂಧೀಜಿ ಅವರ ಹೆಸರಿನಲ್ಲಿ ಗೋಷ್ಠಿನಡೆಸುವ ಮೂಲಕ ಸಂಘ ಪರಿವಾರದ ಹಿಡನ್ ಅಜೆಂಡಾವನ್ನು ಹೇರುವ ಪ್ರಯತ್ನವನ್ನು ಸಾಹಿತ್ಯ ಪರಿಷತ್‌ನ ಅಧ್ಯಕ್ಷರು, ಪದಾಧಿಕಾರಿಗಳು ಮಾಡುತ್ತಿದ್ದಾರೆ ಎಂದು ದೂರಿದರು.
ಸಾಹಿತ್ಯ ಪರಿಷತ್ ಅಧ್ಯಕ್ಷರು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಪರಿಷತ್‌ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ತಕ್ಷಣ ಸಮ್ಮೇಳನದ ಎಲ್ಲ ಸಮಿತಿ ಹಾಗೂ ವೇದಿಕೆಗಳ ಮೇಲೆ ದಲಿತರನ್ನು, ರೈತ ಮುಖಂಡರನ್ನು ಕರೆಸುವ ಬಗ್ಗೆ ಗಮನ ಹರಿಸಬೇಕು. ಇಲ್ಲವಾದರೆ ಸಮ್ಮೇಳನದ ದಿನ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಮಾತೃಭೂಮಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರವಿಕುಗ್ವೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಎಲ್ಲ ಜಾತಿಜನಾಂಗವನ್ನು ಒಳಗೊಂಡ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಪರಿಷತ್ ಅಧ್ಯಕ್ಷ ಹಿತಕರ ಜೈನ್ ಹಾಗೂ ಖಜಾಂಚಿ ನಾರಾಯಣಮೂರ್ತಿ ತಮ್ಮ ಪೂರ್ವಾಶ್ರಮವಾದ ಸಂಘಪರಿವಾರದ ಚಟುವಟಿಕೆಗಳನ್ನು ಪರಿಷತ್ ಚೌಕಟ್ಟಿಗೆ ತರುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದರು.
ಸಾಹಿತ್ಯ ಪರಿಷತ್‌ನಂತಹ ಸಂಘಟನೆಯ ಪಾವಿತ್ರ್ಯವನ್ನು ಉಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಪರಿಷತ್ ಕಾರ್ಯಕ್ರಮ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಇರಬೇಕು. ತಕ್ಷಣ ಉಪವಿಭಾಗಾಧಿಕಾರಿಯವರು ಮಧ್ಯಪ್ರವೇಶಿಸಿ ನಡೆದಿರುವ ಲೋಪವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮಂಜುನಾಥ ಚಿಪ್ಪಳಿ ರೈತ ಸಂಘದ ಗುರುಮೂರ್ತಿ, ಬಾಲಚಂದ್ರ ಗೌಡ, ದಲಿತ ಸಂಘರ್ಷ ಸಮಿತಿ ಪ್ರಮುಖರಾದ ನಾಗರಾಜ ಕೆ., ನಟರಾಜ ಗೇರುಬೀಸು, ಸೋಮಶೇಖರ್, ಮಂಡ್ಯ ಸುರೇಶ್, ನಾರಾಯಣ ಅರಮನೆಕೇರಿ, ವೈ.ಎನ್.ಹುಬ್ಬಳಿ, ಬಂಗಾರಪ್ಪಶುಂಠಿಕೊಪ್ಪ, ಅಣ್ಣಪ್ಪ ಬಾಳೆಗುಂಡಿ, ಗುತ್ಯಪ್ಪ ಇನ್ನಿತರರು ಹಾಜರಿದ್ದರು.







