ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಸರಣಿ; ಕ್ಲೀನ್‌ಸ್ವೀಪ್ ಸಾಧಿಸಿದ ಪಾಕಿಸ್ತಾನ

ಅಬುಧಾಬಿ, ಸೆ.28: ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡದ ವಿರುದ್ಧ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ ಪಾಕ್ ತಂಡ ಮೊದಲ ಬಾರಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಇಲ್ಲಿನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಮಂಗಳವಾರ ನಡೆದ 3ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್‌ಇಂಡೀಸ್ ಎಡಗೈ ಸ್ಪಿನ್ನರ್ ಇಮಾದ್ ವಸೀಂ(3-21) ದಾಳಿಗೆ ಸಿಲುಕಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 103 ರನ್ ಗಳಿಸಿತು.
ವಸೀಂ ಸರಣಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದು ಮಿಂಚಿದರು. ವಿಂಡೀಸ್‌ನ ಪರ ಮರ್ಲಾನ್ ಸ್ಯಾಮುಯೆಲ್ಸ್ ಔಟಾಗದೆ 42 ರನ್ ಗಳಿಸಿದರೆ, ಕೀರೊನ್ ಪೊಲಾರ್ಡ್ ಔಟಾಗದೆ 16 ರನ್ ಗಳಿಸಿದ್ದಾರೆ.
ಆಲ್‌ರೌಂಡರ್ ಶುಐಬ್ ಮಲಿಕ್(ಔಟಾಗದೆ 43) 16ನೆ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟುವುದರೊಂದಿಗೆ ಪಾಕ್ ತಂಡಕ್ಕೆ 8 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.
ಪಾಕಿಸ್ತಾನ ದುಬೈನಲ್ಲಿ ನಡೆದ ಮೊದಲೆರಡು ಪಂದ್ಯಗಳನ್ನು ಕ್ರಮವಾಗಿ 9 ಹಾಗೂ 16 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ವೆಸ್ಟ್‌ಇಂಡೀಸ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನಾಲ್ಕನೆ ಕನಿಷ್ಠ ಮೊತ್ತ ದಾಖಲಿಸಿತ್ತು. ಗೆಲ್ಲಲು ಸುಲಭ ಸವಾಲು ಪಡೆದಿದ್ದ ಪಾಕ್ ತಂಡ ಬಾಬರ್ ಆಝಂ(ಔಟಾಗದೆ 27) ಹಾಗೂ ಮಲಿಕ್ 3ನೆ ವಿಕೆಟ್ ನಡೆಸಿದ 68 ರನ್ ಜೊತೆಯಾಟದ ನೆರವಿನಿಂದ ಗೆಲುವಿನ ದಡ ಸೇರಿತು.
34 ಎಸೆತಗಳನ್ನು ಎದುರಿಸಿದ್ದ ಮಲಿಕ್ 4 ಬೌಂಡರಿ, 1 ಸಿಕ್ಸರ್ ಬಾರಿಸಿದ್ದರು. ಆಝಂ 24 ಎಸೆತಗಳ ಇನಿಂಗ್ಸ್‌ನಲ್ಲಿ ಕೇವಲ 1 ಬೌಂಡರಿ ಬಾರಿಸಿದ್ದರು. ಪಾಕಿಸ್ತಾನ ಮೊದಲ 6 ಓವರ್‌ಗಳಲ್ಲಿ 36 ರನ್ ಗಳಿಸಿತ್ತು. ಆದರೆ, ಚೊಚ್ಚಲ ಪಂದ್ಯ ಆಡಿದ್ದ ವೇಗದ ಬೌಲರ್ ಕೆಸ್ರಿಕ್ ವಿಲಿಯಮ್ಸ್(2-15) ಆರಂಭಿಕ ದಾಂಡಿಗರಾದ ಶಾರ್ಜೀಲ್ ಖಾನ್(11) ಹಾಗೂ ಖಲೀದ್ ಲತೀಫ್(21)ರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಮತ್ತೊಮ್ಮೆ ಮುಗ್ಗರಿಸಿದ ವಿಂಡೀಸ್: ಸರಣಿಯಲ್ಲಿ ವಿಂಡೀಸ್ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದೆ. ಕಳೆದ ತಿಂಗಳು ಫ್ಲೋರಿಡಾದಲ್ಲಿ ಭಾರತದ ವಿರುದ್ಧದ ಟ್ವೆಂಟಿ-20ಯಲ್ಲಿ 6 ವಿಕೆಟ್‌ಗೆ 245 ರನ್ ಗಳಿಸಿದ್ದ ವಿಂಡೀಸ್ ತಂಡ ಪಾಕ್ ವಿರುದ್ಧ ಸಂಪೂರ್ಣ ವಿಫಲವಾಗಿದೆ.
ಇದೀಗ ಉಭಯ ತಂಡಗಳು ಶುಕ್ರವಾರದಿಂದ ಶಾರ್ಜಾದಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿ ಆಡಲು ಸಜ್ಜಾಗಲಿವೆ. ಈ ಎರಡು ತಂಡಗಳು ಅ.13 ರಿಂದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಸಂಕ್ಷಿಪ್ತ ಸ್ಕೋರ್
ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 103/5
(ಸ್ಯಾಮುಯೆಲ್ಸ್ ಔಟಾಗದೆ 42, ವಸೀಂ 3-21)
ಪಾಕಿಸ್ತಾನ: 15.1 ಓವರ್‌ಗಳಲ್ಲಿ 108/2
(ಶುಐಬ್ ಮಲಿಕ್ ಔಟಾಗದೆ 43, ಬಾಬರ್ ಆಝಂ 27, ಲತೀಫ್ 21, ವಿಲಿಯಮ್ಸ್ 2-5)
ಪಂದ್ಯಶ್ರೇಷ್ಠ: ಇಮಾದ್ ವಸೀಂ
ಸರಣಿಶ್ರೇಷ್ಠ: ಇಮಾದ್ ವಸೀಂ





