ಜಯರಾಮ್, ಪ್ರಣೀತ್ ಶುಭಾರಂಭ, ಶ್ರೀಕಾಂತ್, ಕಶ್ಯಪ್‌ಗೆ ಸೋಲು
ಕೊರಿಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಮೆಂಟ್

ಸಿಯೊಲ್, ಸೆ.28: ಕೊರಿಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತ ಮಿಶ್ರ ಫಲಿತಾಂಶ ದಾಖಲಿಸಿದೆ. ಭಾರತೀಯ ಶಟ್ಲರ್‌ಗಳಾದ ಅಜಯ್ ಜಯರಾಮ್ ಹಾಗು ಬಿ.ಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್‌ನಲ್ಲಿ ಎರಡನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಬುಧವಾರ ಇಲ್ಲಿ ನಡೆದ 600,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಜಯರಾಮ್ ಹಾಗೂ ಪ್ರಣೀತ್ ಗೆಲುವು ಸಾಧಿಸಿದರೆ, ಕೆ.ಶ್ರೀಕಾಂತ್, ಪಿ. ಕಶ್ಯಪ್, ಎಚ್‌ಎಸ್ ಪ್ರಣಯ್ ಹಾಗೂ ತನ್ವಿ ಲಾಡ್ ಮೂರು ಸೆಟ್‌ಗಳ ಪಂದ್ಯಗಳಲ್ಲಿ ಕಠಿಣ ಹೋರಾಟ ನೀಡಿದರೂ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಇಂದು 29ನೆ ವರ್ಷಕ್ಕೆ ಕಾಲಿಟ್ಟ ಜಯರಾಮ್, ಕೊರಿಯಾದ ಜಿಯೊನ್ ಹಿಯೊಕ್‌ರನ್ನು 45 ನಿಮಿಷಗಳ ಹೋರಾಟದಲ್ಲಿ 23-21, 21-18 ಸೆಟ್‌ಗಳ ಅಂತರದಿಂದ ಮಣಿಸಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.
ಮುಂಬೈನ ಜಯರಾಮ್ ಕಳೆದ ವರ್ಷ ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಜಿನ್ ವಿರುದ್ಧ ಸೋತಿದ್ದರು. ಇದೀಗ ಸೋಲಿಗೆ ಸೇಡು ತೀರಿಸಿಕೊಂಡಿರುವ ಜಯರಾಮ್ ಮುಂದಿನ ಸುತ್ತಿನಲ್ಲಿ ಚೀನಾದ ಹುಯಾಂಗ್ ಯೂಕ್ಸಿಯಾಂಗ್‌ರನ್ನು ಎದುರಿಸಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಪ್ರಣೀತ್ ಚೈನೀಸ್ ತೈಪೆಯ ಸು ಜೆನ್-ಹಾವೊರನ್ನು 21-13, 12-21, 21-15 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. ಮುಂದಿನ ಸುತ್ತಿನಲ್ಲಿ 6ನೆ ಶ್ರೇಯಾಂಕದ ಕೊರಿಯಾದ ಸನ್ ವಾನ್ ಹೊರನ್ನು ಎದುರಿಸಲಿದ್ದಾರೆ.
ಇದೇ ವೇಳೆ, ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ, ಪ್ರಸ್ತುತ ಟೂರ್ನಿಯಲ್ಲಿ ಭಾರತದ ನಾಯಕತ್ವವನ್ನು ವಹಿಸಿಕೊಂಡಿದ್ದ ಕೆ.ಶ್ರೀಕಾಂತ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ 10-21, 24-22, 17-21 ಗೇಮ್‌ಗಳ ಅಂತರದಿಂದ ವೀರೋಚಿತ ಸೋಲುಂಡಿದ್ದಾರೆ.
ಮಂಗಳವಾರ 3 ಪಂದ್ಯಗಳನ್ನು ಆಡಿದ್ದ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಚೀನಾದ ಟಿಯಾನ್ ಹೊವಿ ವಿರುದ್ಧ 22-20, 10-21, 13-21 ಅಂತರದಿಂದ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಸ್ವಿಸ್ ಓಪನ್ ಚಾಂಪಿಯನ್ ಪ್ರಣಯ್ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲ್ಲಲು ಶತ ಪ್ರಯತ್ನ ನಡೆಸಿದರೂ ಅಂತಿಮವಾಗಿ ಚೈನೀಸ್ ತೈಪೆಯ ವಾಂಗ್ ಝು ವೀ ವಿರುದ್ಧ 23-21, 17-21, 15-21 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿದ್ದ ತನ್ವಿ ಲಾಡ್ ಡೆನ್ಮಾರ್ಕ್‌ನ ಅನ್ನಾ ಮ್ಯಾಡ್ಸನ್ ವಿರುದ್ಧ 18-21, 21-13, 18-21 ಅಂತರದಿಂದ ಸೋತಿದ್ದಾರೆ.







