‘ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಮುಖ್ಯ’
ಬೆಳ್ತಂಗಡಿ, ಸೆ.28: ಸರಕಾರಿ ನೌಕರಿಯಾಗಲಿ, ಖಾಸಗಿ ಉದ್ಯೋಗದಲ್ಲಾಗಲಿ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆಯನ್ನು ಬೆಳೆಸಿದರೆ ಯಾವ ಟೀಕೆ ಟಿಪ್ಪಣಿಗಳು ಎದುರಾದರೂ ಕ್ಷಣದಲ್ಲಿ ಮಾಯವಾಗುತ್ತವೆ. ಪ್ರಾಮಾಣಿಕತೆಯ ವೃತ್ತಿಯ ಪ್ರಶಸ್ತಿ ನಿವೃತ್ತಿಯ ಸಂದರ್ಭ ಸಿಗುವ ಗೌರವದ ಸಂಭ್ರಮವೇ ಸಾಕ್ಷಿ ಎಂದು ಬೆಳ್ತಂಗಡಿ ಪಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಹೇಳಿದರು.
ಬುಧವಾರ ಬೆಳ್ತಂಗಡಿ ಪಪಂ ಸಭಾಂಗಣದಲ್ಲಿ ನಿವೃತ್ತರಾದ ಪಂಚಾಯತ್ ಆಹಾರ ನಿರೀಕ್ಷಕ ಮಂಜಪ್ಪ ಸಪಲ್ಯ ಹಾಗೂ ಪೌರ ಕಾರ್ಮಿಕ ಪುಂಕುಡ ರವರ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಪಂಚಾಯತ್ ಉಪಾಧ್ಯಕ್ಷ ಜಗದೀಶ್ ಮಾತನಾಡಿದರು. ಸನ್ಮಾನ ಪಡೆದು ಮಾತನಾಡಿದ ಆಹಾರ ನಿರೀಕ್ಷಕ ಮಂಜಪ್ಪ ಸಪಲ್ಯ, ಹಿರಿಯರ ಪ್ರೇರಣೆಯಂತೆ 1982ರಲ್ಲಿ ಮಾಸಿಕ 270 ರೂ. ವೇತನಕ್ಕೆ ಪಂಚಾಯತ್‌ನಲ್ಲಿ ವೃತ್ತಿ ಆರಂಭಿಸಿದ್ದು, ಪ್ರಾಮಾಣಿಕತೆಗೆ ಹೆಚ್ಚು ಮಹತ್ವ ನೀಡಿದ್ದೇನೆ ಎಂದರು. ಇದೇ ಸಂದರ್ಭ ಪೌರ ದಿನಾಚರಣೆ ಪ್ರಯುಕ್ತ ಪೌರ ಕಾರ್ಮಿಕರಾದ ಮೋಂಟ ಹಾಗೂ ರವಿ ಅವರನ್ನು ಸನ್ಮಾನಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಇಂಜಿನಿಯರ್ ಮಹಾವೀರ ಅರಿಗ, ಶಹರಿ ರೋಜ್‌ಗಾರ್ ಯೋಜನೆಯ ಯೋಜನಾಧಿಕಾರಿ ವೆಂಕಟರಮಣ ಶರ್ಮ, ಸದಸ್ಯರಾದ ರಾಜೇಶ್, ಮಮತಾ ಶೆಟ್ಟಿ, ಜೇಮ್ಸ್ ಡಿಸೋಜಾ, ಮುಸ್ತಾರ್ ಜಾನ್ ಮೆಹಬೂಬ್, ಶುಭಾ ಶರತ್, ನಳಿನಿ ವಿಶ್ವನಾಥ್, ನಾಮನಿರ್ದೇಶನ ಸದಸ್ಯರಾದ ಜನಾರ್ದನ ಬಂಗೇರ ಮೂಡಾಯಿಗುತ್ತು, ಲ್ಯಾನ್ಸಿ ಪಿರೇರಾ, ರಮೇಶ್ ಪೂಜಾರಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.





