ವಿಮೆರಹಿತ ವಾಹನಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಉಡುಪಿ, ಸೆ.28: ಅಪಘಾತದ ಸಂದರ್ಭ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ವಿಮೆ ಇಲ್ಲದ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಆಗ್ರಹಿಸಿದ್ದಾರೆ. ಉಡುಪಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಂಭವಿಸಿದ ಎಂಟು ಅಪಘಾತ ಪ್ರಕರಣಗಳಲ್ಲಿ ವಾಹನ ವಿಮೆ ಇಲ್ಲದೆ ಗಾಯಾಳುಗಳು ಅತಂತ್ರರಾಗುವಂತಾಗಿದೆ. ಆದ್ದರಿಂದ ಇಲಾಖೆಯು ಪ್ರತಿಯೊಬ್ಬ ವಾಹನದ ಮಾಲಕರು ವಿಮೆಯನ್ನು ಸರಿಯಾಗಿ ಮಾಡುವ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಿ, ಅಪಘಾತದಿಂದ ಗಾಯಗೊಂಡವರಿಗೆ ಮತ್ತು ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸುವ ಕಾರ್ಯವಾಗಬೇಕಿದೆ ಎಂದರು.
ವಿಮೆ ಇಲ್ಲದ ವಾಹನಗಳ ವಿರುದ್ಧ ಅಪಘಾತ ಪ್ರಕರಣ ದಾಖಲಾದ ಸಂದರ್ಭ ಇಲಾಖೆಯು ನೊಂದ ಕುಟುಂಬಸ್ಥರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಾಹನದ ಮಾಲಕನ ಚರ ಸ್ಥಿರ ಸೊತ್ತನ್ನು ಮುಟ್ಟುಗೋಲು ಹಾಕಬೇಕು. ಏಕೆಂದರೆ ಘಟನೆ ನಡೆದ ಬಳಿಕ ತನ್ನಲ್ಲಿರುವ ಆಸ್ತಿಯನ್ನು ಆತ ಕೋರ್ಟ್‌ನಿಂದ ತೀರ್ಪು ಬರುವ ಮೊದಲೆ ಮಾರಾಟ ಮಾಡುವ ಸಾಧ್ಯತೆಗಳಿವೆ. ಈ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್.ಎಸ್.ತೋನ್ಸೆ, ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.





