ಕರ್ನಾಟಕದ ಪಡಿತರ ಕೂಪನ್ ಪಡೆಯುವಲ್ಲಿನ ಸರಳ ವ್ಯವಸ್ಥೆ ದೇಶದಲ್ಲೇ ಪ್ರಥಮ: ಸಚಿವ ಖಾದರ್
.gif)
ಮಂಗಳೂರು, ಸೆ.29: ಪಡಿತರ ಕೂಪನ್ ಪಡೆಯಲು ರಾಜ್ಯ ಸರಕಾರ ಆರಂಭಿಸಿರುವ 161ಕ್ಕೆ ಕರೆ ಮಾಡುವ ಸರಳ ವಿಧಾನವು ದೇಶದಲ್ಲೇ ಪ್ರಥಮ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಪಡಿತರ ಕೂಪನ್ ಗಾಗಿ ಕ್ಯೂ ನಿಲ್ಲಬೇಕಾಗಿಲ್ಲ. ಮೊಬೈಲ್ ಫೋನ್‌ನಲ್ಲಿ ಕ್ಷಣಮಾತ್ರದಲ್ಲಿ ಪಡಿತರದಾರರು ತಮಗೆ ಬೇಕಾದ ಆಹಾರ ಸಾಮಗ್ರಿಗಳ ಕೂಪನ್ ಪಡೆಯಬಹುದು. ಪಂಚಾಯತ್‌ನಲ್ಲೂ ಕೂಪನ್‌ಪಡೆಯುವ ವ್ಯವಸ್ಥೆಯಿದೆ ಎಂದರು.
ಪ್ರತಿ ತಿಂಗಳು ಕೂಪನ್
ಈ ಮೊದಲು ಮೂರು ತಿಂಗಳಿಗೊಮ್ಮೆ ಕೂಪನ್ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಸಮಸ್ಯೆಗಳು ಉಂಟಾಗದಂತೆ ತಡೆಯುವ ಉದ್ದೇಶದಿಂದ ಪ್ರತಿ ತಿಂಗಳು ಕೂಪನ್ ನೀಡಲಾಗುವುದು ಎಂದು ತಿಳಿಸಿದರು. ಇದೀಗ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ ನೀಡಲಾಗುವ ತಲಾ 3 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ ಬದಲಿಗೆ ಜನರಿಗೆ ಅಗತ್ಯಕ್ಕೆ ತಕ್ಕಂತೆ 5 ಕೆ.ಜಿ. ಅಕ್ಕಿ ವಿತರಿಸಲಾಗುವುದು. ಗೋಧಿ, ಅಕ್ಕಿ, ರಾಗಿಯನ್ನು ಅಗತ್ಯಕ್ಕೆ ತಕ್ಕಂತೆ ನೀಡಲಾಗುವುದು. ಸೆಪ್ಟಂಬರ್‌ನಲ್ಲಿ 4 ಕೆ.ಜಿ. ಅಕ್ಕಿ, 1 ಕೆ.ಜಿ. ಗೋಧಿ ವಿತರಿಸಲಾಗುವುದು ಎಂದು ಸಚಿವ ಖಾದರ್ ವಿವರಿಸಿದರು.
ರಾಜ್ಯ ಸರಕಾರ ಮೀನುಗಾರರಿಗೆ ಪ್ರತಿ ತಿಂಗಳು 1,300 ಲೀಟರ್ ಸೀಮೆ ಎಣ್ಣೆಯನ್ನು ನೀಡಲಾಗುತ್ತಿದ್ದು ಕೇಂದ್ರ ಸರಕಾರ ಮೀನುಗಾರರಿಗೆ ಸೀಮೆ ಎಣ್ಣೆ ನೀಡಬೇಕು ಎಂದು ಹೇಳಿದರು.
ಮುಂದಿನ ತಿಂಗಳ ಅಂತ್ಯದೊಳಗೆ ಹೊಸ ಕಾರ್ಡ್
ಮುಂದಿನ ತಿಂಗಳ ಅಂತ್ಯದೊಳಗೆ ಹೊಸ ಕಾರ್ಡ್ ನೀಡುವ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದ ಅವರು ಪ್ರತಿ ಗ್ರಾಮ ಪಂಚಾಯತ್ ನಲ್ಲಿಯೆ ಸಾಪ್ಟ್ ವೇರ್ ಅಳವಡಿಸಿ ಕಾರ್ಡ್ ಪ್ರಕ್ರಿಯೆ ಆರಂಭಿಸಲಾಗುವುದು. 15. ವರ್ಷದ ಸಮಸ್ಯೆ ಪರಿಹರಿಸಲಾಗುತ್ತಿದೆ ಎಂದರು.
ಬಿಪಿಎಲ್ ಪಡಿತರ ಚೀಟಿ ಪಡೆಯಲು ಹಿಂದೆ ಇದ್ದ 14 ನಿಯಮಾವಳಿಗಳನ್ನು ಸಡಿಲಿಸಲಾಗಿದೆ. ಆದಾಯ ತೆರಿಗೆ ಪಾವತಿಸದ ಸರಕಾರಿ ಉದ್ಯೋಗಿಗಳು, 7 ಎಕರೆ ಜಮೀನು ಇರದವರು, ಖಾಸಗಿ ವಾಹನ ಹೊಂದಿರದವರು( ದ್ವಿಚಕ್ರ ಹೊರತುಪಡಿಸಿ), ಪಾಲಿಕೆ ವ್ಯಾಪ್ತಿಯಲ್ಲಿ 1000. ಚ.ಅಡಿ, ಮುನಿಸಿಪಾಲಿಟಿ ಪ್ರದೇಶದಲ್ಲಿ 1,200 ಚ.ಅಡಿ ಮನೆಯನ್ನು ಹೊಂದಿರದವರು, ತಿಂಗಳಿಗೆ 150 ಯುನಿಟ್ ವಿದ್ಯುತ್ ಉಪಯೋಗಿಸದವರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರೆಂಬ ನಿಯಾಮವಳಿ ರೂಪಿಸಲಾಗಿದೆ ಎಂದರು. ಪಡಿತರ ಚೀಟಿ ಯಲ್ಲಿ ಬೆಳೆಗಳನ್ನು ನೀಡಲು ಸರಕಾರ ನಿರ್ಧರಿಸಿದ್ದು ಇದಕ್ಕಾಗಿ ವಾರ್ಷಿಕ 360 ಕೋಟಿ ಮೀಸಲಿಡಲಾಗಿದೆ ಎಂದರು.
ಕಾವೇರಿ ಜಲವಿವಾದವನ್ನು ಪರಿಹರಿಸಲು ಕೇಂದ್ರ ಮಧ್ಯ ಪ್ರವೇಶದ ಬಗ್ಗೆ ಒತ್ತಾಯಿಸಲಾಗಿದ್ದರೂ ಕೇಂದ್ರ ಕಿವಿಗೊಡಲಿಲ್ಲ. ಜನಸಾಮಾನ್ಯರ ಕಾಳಜಿಯಿರುವ ಸರಕಾರ ಯಾವುದೇ ತ್ಯಾಗಕ್ಕೂ ಸಿದ್ದ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ರಾಜ್ಯದ ಬೇಡಿಕೆ ಬಗ್ಗೆ ಕೇಂದ್ರ ಕಿವಿಗೊಡದಿದ್ದರೂ ನ್ಯಾಯಾಲಯ ಮಾತುಕತೆಗೆ ಸೂಚನೆ ನೀಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರದ ಆಸೆಗೆ ಅಂಟಿಕೊಂಡಿಲ್ಲ. ಯಾವುದೇ ಹಂತದಲ್ಲಿಯೂ ನಾವು ಮುಖ್ಯಮಂತ್ರಿ ಗಳ ಜೊತೆ ಇರುತ್ತೇವೆ ಎಂದು ಹೇಳಿದರು







