ಉಮಾಭಾರತಿ ನೇತೃತ್ವದಲ್ಲಿ ಮಧ್ಯಸ್ಥಿಕೆ ಸಭೆ ಆರಂಭ
ಕಾವೇರಿ ನದಿ ನೀರು ಹಂಚಿಕೆ ವಿವಾದ

ಹೊಸದಿಲ್ಲಿ, ಸೆ.29: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಇಲ್ಲಿನ ಶ್ರಮಶಕ್ತಿ ಭವನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ನಡೆದ ಮಧ್ಯಸ್ಥಿಕೆ ಸಭೆ ಗುರುವಾರ ಬೆಳಗ್ಗೆ ಆರಂಭವಾಗಿದೆ.
ಇನ್ನು ಮುಂದೆ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಎದುರಾಗಿದೆ. ಎರಡೂ ರಾಜ್ಯಗಳಿಗೆ ಕೇಂದ್ರದ ತಜ್ಞರ ತಂಡ ಕಳುಹಿಸಿಕೊಡಬೇಕು. ತಜ್ಞರ ತಂಡ ಸರಿಯಾದ ವರದಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಭೆಯಲ್ಲಿ ಆಗ್ರಹಿಸಿದರು.
ಕಾನೂನು ಬಾಹಿರ ಶಕ್ತಿಗಳಿಗೆ ಕರ್ನಾಟಕ ಅವಕಾಶ ನೀಡುತ್ತಿದೆ. ಕರ್ನಾಟಕದಲ್ಲಿ ತಮಿಳರ ಆಸ್ತಿ-ಪಾಸ್ತಿಗೆ ಹಾನಿ ಮಾಡಲಾಗಿದೆ. ಕೇಂದ್ರ ಸರಕಾರ ತಕ್ಷಣವೇ ಕಾವೇರಿ ನಿರ್ವಹಣ ಮಂಡಳಿಯನ್ನು ರಚಿಸಬೇಕು. ಕರ್ನಾಟಕ ಸುಪ್ರೀಂಕೋರ್ಟ್ ಆದೇಶ ಪಾಲಿಸಿಲ್ಲ. ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘನೆ ಮಾಡಿದೆ’’ಎಂದು ತಮಿಳುನಾಡು ಸಿಎಂ ಬರೆದ ಭಾಷಣವನ್ನು ಕಾರ್ಯದರ್ಶಿ ರಾಮ್‌ಮೋಹನ್ ರಾವ್ ಸಭೆಗೆ ಓದಿ ಹೇಳಿದರು.
ಸಭೆಯಲ್ಲಿ ಕರ್ನಾಟಕದ ಪರ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಹಾಗೂ ನೀರಾವರಿ ಇಲಾಖೆಯ ಕಾರ್ಯದರ್ಶಿ ರಾಕೇಶ್ ಭಾಗವಹಿಸಿದ್ದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅನಾರೋಗ್ಯದ ನಿಮಿತ್ತ ಚೆನ್ನೈ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಲೋಕೋಪಯೋಗಿ ಸಚಿವ ಪಳಿನಿ ಸ್ವಾಮಿ, ಮುಖ್ಯ ಕಾರ್ಯದರ್ಶಿ ರಾಮಮೋಹನ್ ರಾವ್ ಹಾಜರಿದ್ದರು.
ಈ ಮಹತ್ವದ ಸಭೆಯಲ್ಲಿ ಕೇಂದ್ರ ಜಲಸಂಪನ್ಮೂಲ ಖಾತೆಯ ರಾಜ್ಯ ಸಚಿವ ಸಂಜೀವ್ ಕುಮಾರ್ ಬಾಲ್ಯಾನ್ ಉಪಸ್ಥಿತರಿದ್ದರು.







