ಪ್ರಣಾಳ ಶಿಶು ಪ್ರಯತ್ನ ವಿಫಲ , ಕೋಮಾಕ್ಕೆ ಹೋದ ಮಹಿಳೆ

ಜ್ಯೋತಿ ಮತ್ತು ಸುಮನ್ ಕಲ್ಯಾಣ್ ಕಳೆದ ವಾರ ಬಹಳ ಉತ್ಸುಕರಾಗಿದ್ದರು. ಮದುವೆಯಾಗಿ ಒಂಭತ್ತು ವರ್ಷಗಳ ನಂತರ ಹೈದರಾಬಾದ್ ಹೊರಭಾಗದಲ್ಲಿರುವ ನಾಗೊಳೆಯ ಸೃಜನ ಫರ್ಟಿಲಿಟಿ ಸೆಂಟರ್ ಆಸ್ಪತ್ರೆ ಅವರಿಗೆ ವಿಟ್ರೋ ಫರ್ಟಿಲೈಸೇಶನ್ ಮೂಲಕ ಮಗುವಾಗಲು ನೆರವು ನೀಡುವ ಅಭಯ ಕೊಟ್ಟಿತ್ತು.
36 ವರ್ಷದ ಜ್ಯೋತಿ ತಮ್ಮ ಅಂಡವನ್ನು ಸಂಗ್ರಹಿಸಲು ಆಸ್ಪತ್ರೆಗೆ ಹೋಗಿದ್ದರು. ವೈದ್ಯರೇ ಆಗಿರುವ ಸುಮನ್ ಇದರಿಂದಾಗಬಹುದಾದ ಸಮಸ್ಯೆಯನ್ನು ಯೋಚಿಸಿಯೇ ಇರಲಿಲ್ಲ. ಆದರೆ ಇಂದು ಜ್ಯೋತಿ ತಮ್ಮ ಶೇ. 70ರಷ್ಟು ಮೆದುಳಿಗೆ ಹಾನಿಯಾಗಿ ಕೋಮಾದಲ್ಲಿದ್ದಾರೆ. ಅವರನ್ನು ಈಗ ಹೈದರಾಬಾದ್‌ನ ಕಾಮಿನೆನಿ ಆಸ್ಪತ್ರೆಗೆ ಸೇರಿಸಲಾಗಿದೆ. ಜ್ಯೋತಿಗೆ ಕೊಡಲಾದ ಸಾಮಾನ್ಯ ಅನೆಸ್ತೇಶಿಯ ತಪ್ಪಾಗಿದ್ದೇ ಇದಕ್ಕೆ ಕಾರಣ. ಸುಮಾರು ಸಂಜೆ 8.45ರ ಹೊತ್ತಿಗೆ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ ಸೌಜನ್ಯ ಅವರು ಜ್ಯೋತಿಗೆ ಸ್ವಲ್ಪ ಅನೆಸ್ತೇಶಿಯ ಕೊಡುವುದಾಗಿ ಹೇಳಿದ್ದರು. ಆದರೆ ರಾತ್ರಿ 9.30ಕ್ಕೆ ಜ್ಯೋತಿ ಅನೆಸ್ತೇಶಿಯದಿಂದ ಪ್ರಜ್ಞೆ ಪಡೆದುಕೊಂಡಿಲ್ಲ ಎನ್ನುವ ಮಾಹಿತಿಯನ್ನು ವೈದ್ಯರು ನೀಡಿದ್ದರು.
ದಂಪತಿಗಳಿಗೆ ಈ ಚಿಕಿತ್ಸೆ ಪಡೆಯಲು ಬಹಳ ಆತಂಕವಿತ್ತು. 2015ರಲ್ಲಿ ಅಂಡ ತೆಗೆದು ನಂತರ ಮಾಡಿದ ಐವಿಎಫ್ ಚಿಕಿತ್ಸೆ ವಿಫಲವಾದ ಕಾರಣ ಅವರು ಮತ್ತೊಮ್ಮೆ ಪ್ರಯತ್ನಿಸಲು ಬಯಸಿದ್ದರು. ಐವಿಎಫ್‌ನ ಎರಡನೇ ಪ್ರಯತ್ನ ಯಶಸ್ವಿಯಾಗಲಿದೆ ಎಂದುಕೊಂಡಿದ್ದರು. “ಮರುದಿನವೇ ನಾವು ಜ್ಯೋತಿಯನ್ನು ಓಮ್ನಿ ಆಸ್ಪತ್ರೆಗೆ ಸಾಗಿಸಿದೆವು. ಆಕೆ ಗಂಭೀರ ಹೈಪಾಕ್ಸಿಕ್ ಮೆದುಳು ಹಾನಿಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದರು. ನಂತರ ಆಕೆಯನ್ನು ಕಾಮಿನೆನಿ ಆಸ್ಪತ್ರೆಗೆ ಕರೆದೊಯ್ದೆವು. ಕಳೆದ ಎರಡು ವಾರದಿಂದ ಅವರು ವೆಂಟಿಲೇಟರ್‌ನಲ್ಲಿದ್ದಾರೆ. ವೈದ್ಯರ ಪ್ರಕಾರ ಆಕೆಯ ಮಿದುಳಿನ ಶೇ. 70ರಷ್ಟು ಭಾಗಕ್ಕೆ ಹಾನಿಯಾಗಿದೆ” ಎನ್ನುತ್ತಾರೆ ಸುಮನ್. ಜ್ಯೋತಿ ಅನೆಸ್ತೀಶಿಯದಿಂದ ಹೊರ ಬರುವ ಮೊದಲೇ ಟ್ಯೂಬ್ ತೆಗೆದದ್ದೇ ಮಿದುಳಿನ ಹಾನಿಗೆ ಕಾರಣ ಎನ್ನುವುದು ಸುಮನ್ ಅಭಿಪ್ರಾಯ. ಇತರ ದಂಪತಿಗಳಂತೆ ಸುಮನ್ ಮತ್ತು ಜ್ಯೋತಿ ಕೂಡ ಆರಂಭದಲ್ಲಿ ಮಗುವಿಗಾಗಿ ಚಿಂತಿಸಿರಲಿಲ್ಲ. ಆದರೆ ಮೊದಲ ಕೆಲವು ವರ್ಷಗಳ ನಂತರ ಚಿಂತೆ ಶುರುವಾಗಿತ್ತು. ಜ್ಯೋತಿಗೆ ಮಕ್ಕಳಾಗುವ ಇಷ್ಟವಿತ್ತು. ಹೀಗಾಗಿ ಐವಿಎಫ್‌ಗೆ ಹೊರಳಿದ್ದರು. ಆದರೆ ಈಗ ಆಕೆ ಪ್ರಜ್ಞೆಯೇ ಇಲ್ಲದೆ ಆಸ್ಪತ್ರೆಯಲ್ಲಿದ್ದಾರೆ.
ಐವರು ವೈದ್ಯರ ವಿರುದ್ಧ ಸುಮನ್ ದೂರು ದಾಖಲಿಸಿದ್ದಾರೆ. ಚೈತನ್ಯಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃತ್ತಿಪರವಾಗಿ ನಮಗೆ ಕಳಂಕ ಬಂದಿದೆ. ಈ ಪ್ರಕರಣದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನಮ್ಮ ವಿರುದ್ಧ ಅವರು ಮೊಕದ್ದಮೆ ದಾಖಲಿಸಿದ್ದಾರೆ. ಇನ್ನು ನ್ಯಾಯಾಲಯವೇ ತೀರ್ಮಾನಿಸಲಿ ಎಂದು ಡಾ ಸೌಜನ್ಯ ಹೇಳಿದ್ದಾರೆ.
ಕೃಪೆ: http://www.thenewsminute.com/







