ಕಾವೇರಿ ಎಫೆಕ್ಟ್: 45 ನಿಮಿಷದಲ್ಲಿ ಎರಡೂವರೆ ಟನ್ ಈರುಳ್ಳಿ ಖಾಲಿ

ಸುಳ್ಯ, ಸೆ.29: 5 ಕೆಜಿ ಈರುಳ್ಳಿಗೆ 40 ರೂಪಾಯಿ. ಮುಕ್ಕಾಲು ಗಂಟೆಯಲ್ಲಿ ಎರಡೂವರೆ ಟನ್ ಖಾಲಿ. ಹೌದು, ನೀರುಳ್ಳಿ ಧಾರಣೆ ತೀವ್ರ ಕುಸಿದಿದೆ. ಸುಳ್ಯದ ರಸ್ತೆ ಬದಿ ವಾಹನದಲ್ಲಿ ಈರುಳ್ಳಿ ಮಾರಾಟ ಮಾಡುವಲ್ಲಿ ಜನರು ಮುಗಿಬಿದ್ದು ಖರೀದಿಸಿದ ದೃಶ್ಯ ಕಂಡು ಬಂತು.
ಈರುಳ್ಳಿ ಬೆಲೆ ಕುಸಿತ ಸುಳ್ಯದ ಜನತೆಯ ಪಾಲಿಗೆ ಹಬ್ಬವಾಗಿ ಪರಿಣಮಿಸಿದೆ. ರಸ್ತೆ ಬದಿಯಲ್ಲಿ ವಾಹನದಲಿ ಈರುಳ್ಳಿ ತಂದು ಮಾರಾಟ ಮಾಡುವವರು ಕೆಲವೇ ಗಂಟೆಯಲ್ಲಿ ತಮ್ಮ ಮಾಲನ್ನು ಖಾಲಿ ಮಾಡಿ ಹೋಗಿದ್ದಾರೆ. ಕಾವೇರಿ ಗಲಾಟೆಯಿಂದ ತಮಿಳುನಾಡಿಗೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ನೀರುಳ್ಳಿ ಸಾಗಾಟ ಸ್ಥಗಿತವಾಗಿ ಧಾರಣೆಯೂ ತೀರಾ ಕುಸಿದಿದೆ.
ಚಿಕ್ಕಮಗಳೂರಿನಲ್ಲಿ ಬೆಳೆಯುವ ಈರುಳ್ಳಿಯನ್ನು ನಾಲ್ಕೂವರೆ ರೂಪಾಯಿಗೆ ಖರೀದಿಸಿ ವಾಹನದಲ್ಲಿ ತಂದು ಸುಳ್ಯದಲ್ಲಿ ಮಾರಾಟ ಮಾಡಲಾಗುತ್ತದೆ. ಸುಳ್ಯ ಬಸ್ ನಿಲ್ದಾಣದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಈರುಳ್ಳಿ ಮಾರಾಟ ವಾಹನಕ್ಕೆ ಜನರು ಮುಗಿಬಿದ್ದು ಖರೀದಿಸಿದರು. ಈರುಳ್ಳಿ ಉತ್ತಮ ಗುಣಮಟ್ಟದಲ್ಲಿದ್ದರಿಂದ ಮತ್ತು ಕಡಿಮೆ ಬೆಲೆಯಿರುವುದರಿಂದ ಕೇವಲ ಎರಡೂವರೆ ಗಂಟೆಯಲ್ಲಿ ಏಸ್ ಗಾಡಿಯಲ್ಲಿ ತಂದ ಎಲ್ಲಾ ಈರುಳ್ಳಿ ಮಾರಾಟ ಮಾಡಿ ಮತ್ತೆ ಊರಿಗೆ ಮರಳಿದ್ದಾರೆ ಅಲ್ಲಿನ ವ್ಯಾಪಾರಿಗಳು.
ರೈತರಿಗೆ ಕೆಜಿಗೆ ನಾಲ್ಕೂವರೆ ರೂಪಾಯಿ ನೀಡಿ ಖರೀದಿಸಿ ತಂದು ಇಲ್ಲಿ 8 ರೂಪಾಯಿಯಂತೆ ಮಾರಾಟ ಮಾಡುವುದಾಗಿ ಚಿಕ್ಕಮಗಳೂರಿನ ವ್ಯಾಪಾರಿ ಮಕ್ಬೂಲ್ ತಿಳಿಸಿದರು.







