ಕರ್ನಾಟಕದಿಂದ ಸಂವಿಧಾನದ ಆಶಯದ ಉಲ್ಲಂಘನೆ: ಜಯಲಲಿತಾ

ಚೆನ್ನೈ, ಸೆ.29: ಕಾವೇರಿ ನೀರು ಬಿಡಲು ನಿರಾಕರಿಸಿರುವ ಕರ್ನಾಟಕದ ಕ್ರಮವನ್ನು ಟೀಕಿಸಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಇದು ಸುಪ್ರೀಂಕೋರ್ಟ್ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆಯಾಗಿದ್ದು ನ್ಯಾಯಾಂಗ ನಿಂದನೆಯಾಗಿದೆ ಎಂದಿದ್ದಾರೆ. ಅಲ್ಲದೆ ಈ ಕೃತ್ಯ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ನೇತೃತ್ವದಲ್ಲಿ ಇಂದು ನಡೆದ ಕರ್ನಾಟಕ, ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಜಯಲಲಿತಾ ಅವರ ಭಾಷಣವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರಾಮಮೋಹನ ರಾವ್ ಓದಿ ಹೇಳಿದರು.
ತಮಿಳುನಾಡು ಸರಕಾರ ಕೋರ್ಟ್ ತೀರ್ಪನ್ನು ಯಾವತ್ತೂ ಗೌರವಿಸುತ್ತಿದ್ದು ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದೆ. ಇದಕ್ಕೆ ತದ್ವಿರುದ್ಧವಾಗಿ, ಕರ್ನಾಟಕ ಸರಕಾರವು ಸುಪ್ರೀಂಕೋರ್ಟ್ ಆದೇಶವನ್ನು ಅತ್ಯಂತ ತಾತ್ಸಾರವಾಗಿ ಕಂಡಿದೆ. ಗೌರವಾನ್ವಿತ ಸುಪ್ರೀಂಕೋರ್ಟ್‌ನ ಆದೇಶವನ್ನು ಉದ್ದೇಶಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ಧಿಕ್ಕರಿಸಿದೆ ಎಂದು ತಿಳಿಸಿದ್ದಾರೆ. ಅಸೌಖ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕ್ತಿಸೆ ಪಡೆಯುತ್ತಿರುವ ಕಾರಣ ಸಭೆಗೆ ಹಾಜರಾಗಲಿಲ್ಲ ಎಂದು ತಿಳಿಸಿದ್ದಾರೆ.







