ನಾನು ಏಕೆ 'ಇಸ್ಲಾಮಿಕ್ ಭಯೋತ್ಪಾದನೆ' ಎಂದು ಹೇಳುವುದಿಲ್ಲ ?
ಹುತಾತ್ಮ ಯೋಧನ ತಾಯಿಗೆ ಒಬಾಮ ವಿವರಣೆ

ವಾಶಿಂಗ್ಟನ್, ಸೆ. 29: ಭಯೋತ್ಪಾದನೆಯ ವಿಷಯದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ತನ್ನ ರಾಜಕೀಯ ವಿರೋಧಿಗಳಿಂದ ಭಾರೀ ಟೀಕೆಗೊಳಗಾಗಿದ್ದಾರೆ. ಬುಧವಾರ ಅಮೆರಿಕದ ಟೆಲಿವಿಶನ್ ಚಾನೆಲ್ ‘ಸಿಎನ್‌ಎನ್’ ನಡೆಸಿ ಕೊಟ್ಟ ಅಧ್ಯಕ್ಷೀಯ ಟೌನ್‌ಹಾಲ್ ಸಭೆಯಲ್ಲಿ, ‘ಇಸ್ಲಾಮಿಕ್’ ಭಯೋತ್ಪಾದನೆ ಎಂಬುದಾಗಿ ನಿವು ಯಾಕೆ ಹೇಳುವುದಿಲ್ಲ ಎಂಬ ಪ್ರಶ್ನೆಯನ್ನು ಅವರ ಮುಂದಿಡಲಾಯಿತು.
‘‘ಭಯೋತ್ಪಾದನೆ ಕೃತ್ಯದಲ್ಲಿ ನನ್ನ ಮಗ ಪ್ರಾಣ ಕಳೆದುಕೊಂಡಿದ್ದಾನೆ’’ ಎಂಬುದಾಗಿ ಸಭೆಯಲ್ಲಿ ಪ್ರೇಕ್ಷಕರಾಗಿದ್ದ ಟೀನಾ ಹೌಚಿನ್ಸ್ ಎಂಬ ಮಹಿಳೆ ಹೇಳಿದರು. ‘‘ಸ್ವಘೋಷಿತ ಇಸ್ಲಾಮಿಕ್ ಧಾರ್ಮಿಕ ಉದ್ದೇಶಗಳಿಗಾಗಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂಬುದನ್ನು ನೀವು ಈಗಲಾದರೂ ನಂಬುತ್ತೀರಾ? ನಂಬುತ್ತಿರಾದರೆ, ‘ಇಸ್ಲಾಮಿಕ್ ಭಯೋತ್ಪಾದಕ’ ಎಂಬ ಪದವನ್ನು ಬಳಸಲು ನೀವು ಈಗಲೂ ಯಾಕೆ ನಿರಾಕರಿಸುತ್ತಿದ್ದೀರಿ?’’ ಎಂದು ಹೌಚಿನ್ಸ್ ಪ್ರಶ್ನಿಸಿದರು.
ಪ್ರಶ್ನೆಗೆ ಪ್ರತಿಕ್ರಿಯಿಸಿದ ಒಬಾಮ, ಇದೊಂದು ತರದ ‘ಕೃತಕವಾಗಿ ಉತ್ಪಾದಿಸಿದ’ ವಿಷಯ ಎಂಬುದಾಗಿ ಬಣ್ಣಿಸಿದರು.
‘‘ನಾವು ನೋಡುತ್ತಿರುವ ಅಲ್-ಖಾಯ್ದ ಅಥವಾ ಐಸಿಸ್ ಮುಂತಾದ ಭಯೋತ್ಪಾದಕ ಸಂಘಟನೆಗಳು ವಿಕೃತ ಮನಸ್ಸಿನವುಗಳು. ಅವುಗಳು ಇಸ್ಲಾಮನ್ನು ನೆಪವಾಗಿ ಬಳಸಿಕೊಂಡು ಕ್ರೌರ್ಯ ಮತ್ತು ಸಾವನ್ನು ಹರಡುತ್ತಿವೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ನಾನು ಪದೇ ಪದೇ ಹೇಳಿಕೊಂಡು ಬಂದಿದ್ದೇನೆ’’ ಎಂದರು.
‘‘ಈ ಜನರು ಮಕ್ಕಳನ್ನು ಕೊಂದಿದ್ದಾರೆ, ಮುಸ್ಲಿಮರನ್ನೂ ಕೊಂದಿದ್ದಾರೆ, ಮಹಿಳೆಯರನ್ನು ಲೈಂಗಿಕ ದಾಸಿಯರನ್ನಾಗಿ ಬಳಸುತ್ತಾರೆ. ಅವರು ಮಾಡುವ ಯಾವುದೇ ಕೃತ್ಯಗಳನ್ನು ಸಮರ್ಥಿಸುವ ಅಂಶಗಳು ಧರ್ಮದಲ್ಲಿಲ್ಲ’’ ಎಂದು ಒಬಾಮ ಹೇಳಿದರು.
‘‘ಆದರೆ, ಇಂಥ ವಿಷಯಗಳ ಬಗ್ಗೆ ಮಾತನಾಡುವಾಗ ನಾನು ಜಾಗ್ರತೆ ವಹಿಸುತ್ತೇನೆ. ಯಾಕೆಂದರೆ, ಈ ಕೊಲೆಗಡುಕರನ್ನು ನಾವು ಜಗತ್ತಿನಾದ್ಯಂತ ಇರುವ ನೂರಾರು ಕೋಟಿ ಮುಸ್ಲಿಮರೊಂದಿಗೆ ಸೇರಿಸಬಾರದು. ಅಮೆರಿಕದಲ್ಲೂ ಮುಸ್ಲಿಮರಿದ್ದಾರೆ. ಅವರು ಶಾಂತಿಪ್ರಿಯರು, ಜವಾಬ್ದಾರಿ ಹೊಂದಿದವರೂ ಆಗಿದ್ದಾರೆ ಹಾಗೂ ಅವರು ಸೈನಿಕರು, ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕರು ಹಾಗೂ ಶಿಕ್ಷಕರಾಗಿದ್ದಾರೆ. ಅಂತಿಮವಾಗಿ, ನಮ್ಮ ನೆರೆಕರೆಯವರು ಮತ್ತು ಸ್ನೇಹಿತರಾಗಿದ್ದಾರೆ’’.
ಓರ್ವ ಕ್ರೈಸ್ತ ಕೊಲೆಗಡುಕನಾಗಿದ್ದರೆ ಹಾಗೂ ಆತ ತನ್ನ ಕೃತ್ಯಗಳಿಗಾಗಿ ತನ್ನ ಧರ್ಮದ ಹೆಸರನ್ನು ಬಳಸಿದರೆ, ಆತನನ್ನು ಇದೇ ಪದ ಬಳಸಿ ಕರೆಯಬಹುದೇ ಎಂದರು.
‘‘ಜನರನ್ನು ಕೊಲ್ಲುತ್ತಾ ಹಾಗೂ ಬಾಂಬ್‌ಗಳನ್ನು ಸಿಡಿಸುತ್ತಾ ಸಾಗುವ ಸಂಘಟನೆಯೊಂದು, ‘ನಾವು ಕ್ರೈಸ್ತ ಧರ್ಮವನ್ನು ರಕ್ಷಣೆ ಮಾಡುತ್ತಿದ್ದೇವೆ’ ಎಂದು ಹೇಳುತ್ತಾರೆ ಎಂದಿಟ್ಟುಕೊಳ್ಳೋಣ. ಓರ್ವ ಕ್ರೈಸ್ತನಾಗಿ ನನ್ನ ಧರ್ಮದ ಹೆಸರನ್ನು ಬಳಸಲು ನಾನು ಅವರಿಗೆ ಅವಕಾಶ ನೀಡುವುದಿಲ್ಲ. ‘ನೀವು ಕ್ರೈಸ್ತರಿಗಾಗಿ ಕೊಲ್ಲುತ್ತಿದ್ದೀರಿ’ ಎಂಬುದಾಗಿ ಅವರನ್ನು ನಾನು ಹುರಿದುಂಬಿಸಲಾರೆ. ಇದು ಹಾಸ್ಯಾಸ್ಪದ ಎಂದು ನಾನು ಹೇಳುತ್ತೇನೆ’’ ಎಂದು ಒಬಾಮ ಹೇಳಿದರು.
‘‘ನನ್ನ ಧರ್ಮ ಅಂಥವರನ್ನು ಪ್ರತಿನಿಧಿಸುವುದಿಲ್ಲ. ಈ ಜನರು ಏನಾಗಿದ್ದಾರೋ ಅದೇ ಹೆಸರಿನಿಂದ ಅವರನ್ನು ಕರೆಯೋಣ- ಕೊಲೆಗಡುಕರು ಮತ್ತು ಭಯೋತ್ಪಾದಕರು’’ ಎಂದರು.
‘‘ಓರ್ವ ಅಧ್ಯಕ್ಷರು ಅಥವಾ ಅಧ್ಯಕ್ಷರಾಗಲು ಬಯಸುವವರು ಇಂಥ ಭಾಷೆಯನ್ನು ಬಳಸುವ ಮಟ್ಟಕ್ಕೆ ಇಳಿದರೆ ಅಲ್ಲಿ ಅಪಾಯವಿದೆ’’ ಎಂದು ಒಂದು ಹಂತದಲ್ಲಿ ಒಬಾಮ ನುಡಿದರು.





