ರಾಜ್ಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್: ಡಾ.ಜಿ.ಪರಮೇಶ್ವರ್

ಬೆಂಗಳೂರು, ಸೆ.29: ಕಾವೇರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸೆ.30ರಂದು ಅಂತಿಮ ತೀರ್ಪು ನೀಡುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ 'ಲೈಟ್ ಆಫ್ ಕ್ಯಾಂಡಲ್ ಎಕ್ಸಿಬಿಷನ್'ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಬಾರಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದಾಗಿ ರಾಜ್ಯದಲ್ಲಿ ಗಲಭೆಗಳು ನಡೆದಿದ್ದವು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಈ ತಿಂಗಳಲ್ಲಿ ನೀಡಿದ ನಾಲ್ಕು ತೀರ್ಪುಗಳು ಸಹ ರಾಜ್ಯಕ್ಕೆ ವಿರುದ್ಧವಾಗಿದೆ. ಆದರೆ, ಸೆ.30ರಂದು ನೀಡುತ್ತಿರುವ ತೀರ್ಪು ರಾಜ್ಯದ ಪರವಾಗಿರಬಹುದೆಂದು ನಿರೀಕ್ಷಿಸಲಾಗಿದೆ. ಈ ಸಂಬಂಧ ರಾಜ್ಯಪರವಾದ ವಕೀಲರು ಸರಿಯಾದ ಸಾಕ್ಷಾಧಾರಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಕಾವೇರಿ ಪ್ರಕರಣದಲ್ಲಿ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಪ್ರಕರಣವು ನ್ಯಾಯಸಮ್ಮತವಾಗಿ ಬಗೆಹರಿಯಬಹುದೆಂದು ನಿರೀಕ್ಷಿಸಲಾಗಿದೆ. ಹೀಗಾಗಿ ಜನತೆ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಇತ್ತೀಚಿಗೆ ಕಾವೇರಿ ಪ್ರಕರಣದಲ್ಲಿ ಗಲಭೆ ಸೃಷ್ಟಿಸಿ, ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆದರೆ, ನಿರಪರಾಧಿಗಳ ವಿರುದ್ಧ ಯಾವುದೆ ಕ್ರಮವಿಲ್ಲ. ಒಂದು ವೇಳೆ ನಿರಪರಾಧಿಗಳನ್ನು ಬಂಧಿಸಿದ್ದರೆ ಪರಿಶೀಲಿಸಲಾಗುವುದು.
-ಡಾ.ಜಿ.ಪರಮೇಶ್ವರ್, ಗೃಹ ಸಚಿವರು







