ಭಾರತದ ದಾಳಿಗೆ ಪಾಕಿಸ್ತಾನದ ಪ್ರತಿಕ್ರಿಯೆ ಇದು !

ಇಸ್ಲಾಮಾಬಾದ್,ಸೆ.29: ಭಯೋತ್ಪಾದಕರ ಶಿಬಿರಗಳನ್ನು ಗುರಿಯಾಗಿಸಿಕೊಂಡು ತಾನು ನಿಯಂತ್ರಣ ರೇಖೆಯಾಚೆ ಸೇನಾ ಕಾರ್ಯಾಚರಣೆಯನ್ನು ನಡೆಸಿದ್ದೇನೆ ಎಂಬ ಭಾರತದ ಹೇಳಿಕೆಯನ್ನು ‘ಕಟ್ಟುಕಥೆ’ ಎಂದು ಬಣ್ಣಿಸಿರುವ ಪಾಕಿಸ್ತಾನವು, ಅದು ಮಾಮೂಲಾಗಿ ನಡೆಸುವ ಗಡಿಯಾಚೆಯ ದಾಳಿಗಳನ್ನು ‘ಸರ್ಜಿಕಲ್ ದಾಳಿಗಳು ’ಎಂದು ಪುನರ್ ನಾಮಕರಣಗೊಳಿಸುವ ಮೂಲಕ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ‘ಹುಚ್ಚು ಬಯಕೆ’ ಎಂದು ಬಣ್ಣಿಸಿದೆ.
ಪಾಕಿಸ್ತಾನಿ ಸೈನಿಕರು ಈ ದಾಳಿಗೆ ಸೂಕ್ತ ಉತ್ತರವನ್ನು ನೀಡಿದ್ದಾರೆ ಎಂದು ಪಾಕ್ ಸೇನೆಯು ಪ್ರಕಟಣೆಯೊಂದರಲ್ಲಿ ಹೇಳಿದೆ.
ಇಂತಹ ಹೇಳಿಕೆಯನ್ನು ನೀಡುವ ಮೂಲಕ ಭಾರತವು ಸುಳ್ಳು ಪರಿಣಾಮಗಳನ್ನು ್ನಸೃಷ್ಟಿಸಲು ಉದ್ದೇಶಪೂರ್ವಕವಾಗಿ ಭ್ರಮೆಯೊಂದನ್ನು ಹುಟ್ಟಿಸುತ್ತಿದೆ ಎಂದು ಅದು ಹೇಳಿದೆ.
ತನ್ನ ನೆಲದ ಮೇಲೆ ಸರ್ಜಿಕಲ್ ದಾಳಿಗಳು ನಡೆದರೆ ಅದಕ್ಕೆ ಕಠಿಣ ಉತ್ತರ ನೀಡಲಾಗುವುದು ಎಂದು ಪಾಕಿಸ್ತಾನವು ಸ್ಪಷ್ಟಪಡಿಸಿದೆ ಎಂದು ಹೇಳಿಕೆಯು ತಿಳಿಸಿದೆ.
ಭಾರತದ ಹೇಳಿಕೆ ಸತ್ಯವಲ್ಲವೆಂದು ಹೇಳಿದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು, ಭಾರತವು ಕಳೆದ ರಾತ್ರಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿತ್ತು ಮತ್ತು ಗುಂಡಿನ ದಾಳಿಗಳಲ್ಲಿ ಲಘು ಶಸ್ತ್ರಾಸ್ತ್ರಗಳನ್ನು ಮಾತ್ರ ಬಳಸಿತ್ತು. ಭಾರತದ ದಾಳಿಗೆ ಪಾಕ್ ಪಡೆಗಳು ಸೂಕ್ತ ಉತ್ತರ ನೀಡಿವೆ ಎಂದರು.
ಭಾರತದ ಹೇಳಿಕೆಯನ್ನು ಪಾಕಿಸ್ತಾನ ವಾಯುಪಡೆಯೂ ತಿರಸ್ಕರಿಸಿದೆ. ಇಂತಹ ದಾಳಿಗಳಿಗೆ ಸೂಕ್ತ ಉತ್ತರ ನೀಡಲು ಪಾಕಿಸ್ತಾನವು ಸಿದ್ಧವಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಇದಕ್ಕೂ ಮುನ್ನ ಭಾರತದ ‘ಅಪ್ರಚೋದಿತ ಮತ್ತು ರಾಜಾರೋಷ ಆಕ್ರಮಣ’ವನ್ನು ಖಂಡಿಸಿದ ಪ್ರಧಾನಿ ನವಾಝ್ ಶರೀಫ್ ಅವರು, ದೇಶದ ಪ್ರಾದೇಶಿಕ ಅಖಂಡತೆಯನ್ನು ರಕ್ಷಿಸಲು ಪಾಕಿಸ್ತಾನದ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಮರ್ಥವಾಗಿವೆ ಎಂದು ಹೇಳಿದರು.
ಶಾಂತಿಯುತ ನೆರೆಹೊರೆಯನ್ನು ಹೊಂದುವ ಪಾಕಿಸ್ತಾನದ ಉದ್ದೇಶವನ್ನು ಅದರ ದೌರ್ಬಲ್ಯವೆಂದು ಭಾವಿಸಕೂಡದು ಎಂದು ಶರೀಫ್ ಎಚ್ಚರಿಕೆಯನ್ನೂ ನೀಡಿದರು.







