ವೈದ್ಯಕೀಯ ವೃತ್ತಿನಿರತರು ಮಾಹಿತಿ ಜ್ಞಾನವನ್ನು ಪಡೆದುಕೊಳ್ಳಬೇಕಾದ ಅಗತ್ಯವಿದೆ: ಡಾ.ವಿ.ಸುರೇಂದ್ರ ಶೆಟ್ಟಿ
‘ಯೆನೆಪೊಯ ವಿ.ವಿ.ಯಲ್ಲಿ ಯೆನ್ ಕನ್‌ಕ್ಲೇವ್ -3ಡಿ ಕಾರ್ನಿಯೋ ಫೇಶಿಯಲ್ ಇಮೇಜಿಂಗ್’ಅಂತಾರಾಷ್ಟ್ರೀಯ ಸಮ್ಮೇಳನ

ಮಂಗಳೂರು, ಸೆ.29: ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಹೊಸ ಆವಿಷ್ಕಾರಗಳಿಗೆ ಸಂಬಂಧಿಸಿದಂತೆ ನಿರಂತರ ಮಾಹಿತಿ ಜ್ಞಾನವನ್ನು ವೃತ್ತಿನಿರತ ವೈದ್ಯರು ಕಾಲ ಕಾಲಕ್ಕೆ ಪಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಮಣಿಪಾಲ ವಿಶ್ವ ವಿದ್ಯಾನಿಲಯದ (ಫ್ರೊ)ಉಪ ಕುಲಪತಿ ಡಾ.ವಿ.ಸುರೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಅವರು ಇಂದು ಯೆನೆಪೊಯ ದಂತ ವೈದ್ಯಕೀಯ ಕಾಲೇಜ್ ಮತ್ತು ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್‌ನ 25ನೆ ವರ್ಷಾಚರಣೆಯ ಸಂದರ್ಭದಲ್ಲಿ ಹಮ್ಮಿಕೊಂಡ ‘ಯೆನ್ ಕನ್‌ಕ್ಲೇವ್ -3ಡಿ ಕಾರ್ನಿಯೋ ಫೇಶಿಯಲ್ ಇಮೇಜಿಂಗ್’ ಎಂಬ ವಿಷಯದ ಮೂರುದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದ ಮಾಹಿತಿ ಹಾಗೂ ವಾಸ್ತವ ಸ್ಥಿತಿಗತಿಗಳ ನಡುವಿನ ಅಂತರ ಕಡಿಮೆಯಾಗಬೇಕಾದರೆ ವೃತ್ತಿ ನಿರತ ವೈದ್ಯರು ತಮ್ಮ ಅನುಭವದೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಕಾಲಕಾಲದ ಬೆಳವಣಿಗೆಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಡಾ.ಸುರೇಂದ್ರ ಶೆಟ್ಟಿ ತಿಳಿಸಿದರು.
ವೈದ್ಯಕೀಯ ವೃತ್ತಿಕ್ಷೇತ್ರದ ಅನುಭವ ವಿನಿಮಯ ಮಾಡಿಕೊಳ್ಳಲು ಈ ರೀತಿಯ ರಾಷ್ಟ್ರೀಯ ಸಮ್ಮೇಳನ ಸಹಕಾರಿಯಾಗಲಿದೆ. ಈ ಅವಕಾಶವನ್ನು ಯುವ ವೈದ್ಯರು ಬಳಸಿಕೊಳ್ಳುವಂತೆ ಸುರೇಂದ್ರ ಶೆಟ್ಟಿ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೆನೆಪೊಯ ವಿಶ್ವ ವಿದ್ಯಾನಿಲಯದ ಕುಲಪತಿ ಅಬ್ದುಲ್ಲಾ ಕುಂಞ ಮಾತನಾಡುತ್ತಾ, ದೇಶದ ಮಾಜಿ ರಾಷ್ಟ್ರಪತಿ ದಿ.ಎ.ಪಿ.ಜೆ.ಅಬ್ದುಲ್ ಕಲಾಂ ಕರೆ ನೀಡಿದಂತೆ ನಮ್ಮ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಾಧನೆ ಮಾಡಬೇಕಾಗಿದೆ. ಆ ಮೂಲಕ ಸಮಾಜದಲ್ಲಿ ಉತ್ತಮ ರೀತಿಯ ಬದಲಾವಣೆ ತರಲು ಪ್ರಯತ್ನಿಸಬೇಕಾಗಿದೆ. ಸಮ್ಮೇಳನ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಮುಂದಿನ ಉತ್ತಮ ಬೆಳವಣಿಗೆಯ ದೃಷ್ಟಿಯಿಂದ ಸಹಕಾರಿಯಾಗಲಿದೆ ಎಂದು ಕರೆ ನೀಡಿದರು.
ಸಮ್ಮೇಳನದ ಸಂಯೋಜನಾ ಸಮಿತಿಯ ಅಧ್ಯಕ್ಷರಾಗಿ ಡಾ.ಅಖ್ತರ್ ಹುಸೈನ್ ಸಮ್ಮೇಳನದ ವಿವರ ನೀಡಿದರು. ಯೆನೆಪೊಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಚ್.ಶ್ರೀಪತಿರಾವ್ ಸ್ವಾಗತಿಸಿದರು. ಉಪ ಕುಲಪತಿ ಡಾ.ವಿಜಯ ಕುಮಾರ್, ಕುಲಸಚಿವ ಡಾ.ಶ್ರೀಕುಮಾರ್ ಮೆನನ್, ಮೊದಲಾದವರು ಭಾಗವಹಿಸಿದ್ದರು. ಡಾ.ಬಶೀರ್.ಎಂ., ಡಾ.ರೂಪಾಲಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಮ್ಮೇಳನದಲ್ಲಿ ದೇಶ ಹಾಗೂ ವಿದೇಶದ ಪ್ರತಿನಿಧಿಗಳು, ಗಣ್ಯರು ಭಾಗವಹಿಸಿದ್ದರು.







