ಉಮಾ ಭಾರತಿಯಿಂದ ಉಪವಾಸ ಮುಷ್ಕರದ ಎಚ್ಚರಿಕೆ
ಕಾವೇರಿ ಮಾತುಕತೆ ವಿಫಲ

ಹೊಸದಲ್ಲಿ,ಸೆ.29: ಗುರುವಾರ ಇಲ್ಲಿ ನಡೆದ ಸಂಧಾನಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಪರಿಹಾರವೊಂದನ್ನು ಕಂಡುಕೊಳ್ಳುವಲ್ಲಿ ವಿಫಲರಾದ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿಯವರು,ಉಭಯ ರಾಜ್ಯಗಳ ಪೈಕಿ ಕಾವೇರಿಗೆ ಸಂಬಂಧಿಸಿ ಯಾವುದೇ ರಾಜ್ಯದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದರೆ ತಾನು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕಾವೇರಿ ವಿವಾದಕ್ಕೆ ಪರಿಹಾರವೊಂದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಉಭಯ ರಾಜ್ಯಗಳ ನಡುವೆ ಗುರುವಾರ ಸಂಧಾನ ಸಭೆಯೊಂದನ್ನು ಏರ್ಪಡಿಸುವಂತೆ ಸರ್ವೋಚ್ಚ ನ್ಯಾಯಾಲಯವು ಉಮಾ ಭಾರತಿಯವರಿಗೆ ಸೂಚಿಸಿತ್ತು. ಇಂದಿನ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾರ ಪ್ರತಿನಿಧಿಯಾಗಿ ಪಿಡಬ್ಲುಡಿ ಸಚಿವ ಎಡಪ್ಪಾಡಿ ಎಸ್.ಪಳನಿಸ್ವಾಮಿ ಮತ್ತು ಅಧಿಕಾರಿಗಳ ತಂಡ ಪಾಲ್ಗೊಂಡಿದ್ದರು. ಸಭೆಗೆ ಮುನ್ನ ಆಕ್ಷೇಪವನ್ನು ವ್ಯಕ್ತಪಡಿಸಿದ ತಮಿಳುನಾಡು,ಅಧ್ಯಕ್ಷತೆಯನ್ನು ಉಮಾಭಾರತಿಯವರ ಬದಲು ಪ್ರಧಾನಿ ನರೇಂದ್ರ ಮೋದಿಯವರು ವಹಿಸಿಕೊಳ್ಳಬೇಕೆಂದು ಹೇಳಿತು.
ಸಭೆಯಲ್ಲಿ ಸಮಸ್ಯೆಗೆ ಪರಿಹಾರವೊಂದನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸಭೆಯ ಬಳಿಕ ವಿಷಾದವನ್ನು ವ್ಯಕ್ತಪಡಿಸಿದ ಉಮಾ ಭಾರತಿ, ಈಗ ನಿರ್ಧಾರವನ್ನು ಕೈಗೊಳ್ಳುವುದು ಸರ್ವೋಚ್ಚ ನ್ಯಾಯಾಲಯಕ್ಕೆ ಬಿಟ್ಟ ವಿಷಯವಾಗಿದೆ ಎಂದರು.
ತನ್ನ ಜಲಾಶಯಗಳಲ್ಲಿಯ ನೀರಿನ ಸ್ಥಿತಿಯನ್ನು ನೋಡಲು ತಜ್ಞರ ತಂಡವನ್ನು ಕಳುಹಿಸುವಂತೆ ಕರ್ನಾಟಕವು ಕೇಳಿಕೊಂಡಿದೆ. ಇದಕ್ಕೆ ತಮಿಳುನಾಡು ಒಪ್ಪಿಗೆ ನೀಡಿಲ್ಲ. ಹೀಗಾಗಿ ಎರಡೂ ರಾಜ್ಯಗಳ ಅಭಿಪ್ರಾಯಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು. ಇದಕ್ಕೂ ಮುನ್ನ ಸಂಧಾನ ಸಭೆಯಲ್ಲಿ ಉಮಾ ಭಾರತಿ ಅವರು,ಒಟ್ಟಾಗಿ ಕುಳಿತು ಮಾತುಕತೆ ನಡೆಸುವಂತೆ ಮತ್ತು ಕಾವೇರಿ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆ ಹರಿಸಿಕೊಳ್ಳುವಂತೆ ಉಭಯ ರಾಜ್ಯಗಳಿಗೆ ಸೂಚಿಸಿದರು. ನ್ಯಾಯಾಲಯದ ನಿರ್ದೇಶಗಳನ್ನು ಉಲ್ಲಂಘಿಸುವ ಬದಲು ಉಭಯ ರಾಜ್ಯಗಳು ಪರಿಹಾರದೊಂದಿಗೆ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಬೇಕು ಎಂದರು.







