ಪ್ರೇಕ್ಷಕರ ಮಧ್ಯೆ ಮಗು ಕಾಣೆಯಾದಾಗ ಆಡುತ್ತಿದ್ದ ನಡಾಲ್ ಏನು ಮಾಡಿದರು ನೋಡಿ ?
ಚಾಂಪಿಯನ್ ನ ಹೃದಯ !

ಮ್ಯಾಡ್ರಿಡ್, ಸೆ.29: ಸ್ಪೇನ್‌ನ ಟೆನಿಸ್ ಸ್ಟಾರ್ ರಫೆಲ್ ನಡಾಲ್ ಕ್ರೀಡಾಸ್ಫೂರ್ತಿಗೊಂದು ಉತ್ತಮ ನಿದರ್ಶನವಾಗಿ ಹೊರಹೊಮ್ಮಿದ್ದಾರೆ. ಪ್ರೇಕ್ಷಕರ ಮಧ್ಯೆ ಮಗು ಕಾಣೆಯಾದಾಗ ಟೆನಿಸ್ ಪಂದ್ಯ ಆಡುವುದನ್ನು ನಿಲ್ಲಿಸಿದ ಅವರು ಮಗು ಪತ್ತೆಯಾಗಲು ಪರೋಕ್ಷವಾಗಿ ನೆರವಾದರು.
ಪ್ರದರ್ಶನ ಪಂದ್ಯದಲ್ಲಿ ಆಡುತ್ತಿದ್ದ ನಡಾಲ್ ಮಹಿಳೆಯೊಬ್ಬರು ಹೆಣ್ಣು ಮಗುವೊಂದನ್ನು ಹುಡುಕುತ್ತಿರುವುದನ್ನು ತಕ್ಷಣವೇ ಗ್ರಹಿಸಿ ಪಂದ್ಯ ಆಡುವುದನ್ನು ನಿಲ್ಲಿಸಿದರು. ಈ ಮೂಲಕ ಪ್ರೇಕ್ಷಕರ ಗಮನ ಮಗುವನ್ನು ಹುಡುಕುತ್ತಿದ್ದ ತಾಯಿಯತ್ತ ಹರಿಯುವಂತೆ ಮಾಡಿದರು.
ನೆರೆದಿದ್ದ ಟೆನಿಸ್ ಅಭಿಮಾನಿಗಳು ಮಹಿಳೆಗೆ ನೆರವಾಗಲು ಮುಂದಾದರು. ಕಾಣೆಯಾಗಿದ್ದ ಕ್ಲಾರಾ ಹೆಸರಿನ ಮಗುವನ್ನ್ನು ಕೂಗಿ ಕರೆದ ಪ್ರೇಕ್ಷಕರು ತಕ್ಷಣವೇ ತಾಯಿ-ಮಗುವನ್ನು ಒಟ್ಟಿಗೆ ಸೇರಿಸಿದರು. ತಾಯಿ-ಮಗು ಒಂದಾದ ಬಳಿಕ ನಡಾಲ್ ತಮ್ಮ ಪಂದ್ಯವನ್ನು ಮುಂದುವರಿಸಿದರು. ನಡಾಲ್ ಅವರು ಸ್ಪೇನ್‌ನ ಯುವ ಆಟಗಾರ ಸಿಮೊನ್ ಸೊಲ್ಬಸ್‌ರೊಂದಿಗೆ ಜಾನ್ ಮೆಕ್‌ಎನ್ರಾಯ್ ಹಾಗೂ ಕಾರ್ಲೊಸ್ ಮೊಯಾ ವಿರುದ್ಧ ಪುರುಷರ ಡಬಲ್ಸ್ ಪಂದ್ಯ ಆಡುತ್ತಿದ್ದಾಗ ಇಂತಹ ಅಪರೂಪದ ಘಟನೆ ನಡೆದಿತ್ತು ಎಂದು ‘ದಿ ಸನ್’ ಪತ್ರಿಕೆ ವರದಿ ಮಾಡಿದೆ.
ನಡಾಲ್ ಮಗುವನ್ನು ಹುಡುಕುತ್ತಿದ್ದ ತಾಯಿಗೋಸ್ಕರ ಪಂದ್ಯ ಆಡುವುದನ್ನು ನಿಲ್ಲಿಸಿದ ವಿಡಿಯೋ ವೈರಲ್‌ನಂತೆ ಹರಿದಾಡುತ್ತಿದೆ.







